Sunday, August 7, 2011

ವಿಜಯನಗರದ ಪ್ರವಾಸ - ೩

ಬಹಳ ದಿನಗಳಾದ ಮೇಲೆ ಮೂರನೇ ದಿನದ ಕಥೆಯನ್ನೂ ಬರೆಯುತ್ತಿದ್ದೇನೆ

ನಾವು ಬೆಳಗ್ಗೆ ತೋರಣಗಲ್ಲಿನಲ್ಲಿ ರೂಂ ಖಾಲಿ ಮಾಡಿ - ಹೊಸಪೇಟೆಯಲ್ಲಿ ಹೋಟೆಲ್ಲಿನಲ್ಲಿ ಲುಗ್ಗೆಜ್ಜನ್ನು ಇಟ್ಟೆವು. ಬಸ್ಸಿನಲ್ಲಿ ಹಂಪೆಗೆ ಹೋದೆವು .   ಇಳಿಯುತ್ತಲೇ ಆಟೋದವನೊಂದಿಗೆ ಮಾತನಾಡಿ ಹಂಪೆಯನ್ನು ತೋರಿಸಲು ೪೦೦ ರೂಪಾಯಿ ಮಾತನಾಡಿಕೊಂಡೆವು.  ಇವನು ಸಾಕಷ್ಟು ಜಾಗಗಳನ್ನು ತೋರಿಸಿದರು ಸಹ, ಅದರ ಇತಿಹಾಸದ ಅರಿವಿರಲಿಲ್ಲ.   ನನಗೇನೋ ಗೈಡ್ ಜೊತೆ ಹೋಗುವುದೇ ಉತ್ತಮ ಎನ್ನಿಸಿತು. ಇವನು ಆಟೋದಲ್ಲಿ ಕರೆದುಕೊಂದು ಹೋಗುವುದಕ್ಕಿಂತ ನಡೆಸಿದ್ದೆ ಹೆಚ್ಚು.

ಮೊದಲು ನೋಡಿದ್ದು ಚಕ್ರ ತೀರ್ಥ .  ಇಲ್ಲಿ ತುಂಗೆಯು ನೇರವಾಗಿ ಬಂದು, ತಕ್ಷಣ ಎಡಕ್ಕೆ ತಿರುಗುತ್ತಾಳೆ.  ಹಾಗೆ ತಿರುಗುವಾಗ ಒಂದು ಸುಳಿ ಮೂಡುತ್ತದೆ. ಮಳೆಗಾಲದಲ್ಲಿ ಬಹುಶಃ ಇದು ಭಯಂಕರವಾಗಿ ಕಾಣುತ್ತದೆ.


ಚಕ್ರ ತೀರ್ಥ

ನಂತರ ಮೇಲೆ ಹೋಗಿ ಯಂತ್ರೋದ್ಧರಕನ (ಹನುಮನ) ದರುಶನ ಪಡೆದೆವು . ವ್ಯಾಸರಾಯರು ಹನುಮಂತನನ್ನು (ಭಕ್ತಿಯಿಂದ) ಯಂತ್ರದಲ್ಲಿ ಬಂದಿಸಿದ್ದರೆಂದು ಜನರು ತಿಳಿದಿದ್ದರೆ. ಇಲ್ಲಿಂದ ನಡೆದುಕೊಂಡು ನದಿಯ ದಂಡೆಯಲ್ಲಿ ವಿಜಯ ವಿಠ್ಠಲ ದೇವಸ್ತಾನಕ್ಕೆ ಹೊರಟೆವು .

ನದಿಯ ದಂಡೆಯಲ್ಲಿ ಕಂಡ ಕೆಲವು ಸುಂದರ ಚಿತ್ರಗಳು

                                    







ಮುಂದೆ ನಡೆಯುವಾಗ ಪುರಂದರ ಮಂಟಪ ಸಿಗುತ್ತದೆ.  ಒಂದು ಪ್ರಶಾಂತವಾದ ಜಾಗ.  ಮಳೆಗಾಲದಲ್ಲಿ ನೀರಿನಲ್ಲಿ ಮುಳುಗಿರುತ್ತದೆ ಎಂದು ಅನಿಸುತ್ತದೆ. ಪಕ್ಕದಲ್ಲಿ ಕಟ್ಟಿದ್ದ ದರ್ಗಾ ತೆಗೆದು ಹಾಕಿದ್ದಾರೆ .





ಇಲ್ಲಿಂದ ಇನ್ನು ಸ್ವಲ್ಪ ಮುಂದೆ ನಡೆದರೆ ನಾವು ಮೊದಲ ದಿನ ನೋಡಿದ ವಿಜಯ ವಿಠ್ಠಲ ದೇವಸ್ಥಾನಕ್ಕೆ ಹಿಂದಿನಿಂದ ಸೇರುತ್ತೇವೆ.
ಅಲ್ಲಿ ಕೃಷ್ಣ ದೇವರಾಯ ತುಲಾಭಾರ ಮಾಡುತ್ತಿದ್ದ ಸ್ಥಳ.  ಈ ತುಲಾಭಾರ  ಮಂಟಪದ ಕೆಳಗೆ, ಬಲ ಭಾಗದಲ್ಲಿ - ಕೃಷ್ಣದೇವ ರಾಯ ಮತ್ತು ಅವನ ಇಬ್ಬರು ಪತ್ನಿಯರ ಕೆತ್ತನೆಯಿದೆ.

ಇದರ ಸುತ್ತಲು ಕಣ್ಣು ಹಾಯಿಸಿದರೆ - ಸುತ್ತಲು ಪಾಳು ಬಿದ್ದ ದೇವಾಲಯಗಳು ಕಾಣುತ್ತವೆ.







ಇಲ್ಲಿಂದ  ಮತ್ತೆ ನಾವು ವಿರೂಪಾಕ್ಷ ದೇವಾಲಯಕ್ಕೆ ಇನ್ನೊಂದು ದಾರಿಯಿಂದ ವಾಪಾಸ್ ಹೊರಟೆವು .

ದಾರಿಯಲ್ಲಿ ಬರುವಾಗ ಸುಗ್ರೀವನ ಗುಹೆ ಕಾಣುತ್ತದೆ.  ಇದೆ ಸುಗ್ರೀವನ ವಾಸಸ್ಥಳ ಎಂದು ಹೇಳುತ್ತಾರೆ .




ಸುಗ್ರೀವನ  ಗುಹೆಯ ಮುಂದೆ ಗುಡ್ಡವಿದೆ.  ಆ ಗುಡ್ಡದ ಮೇಲೆ ಹಲವಾರು ಪಾಳು ಬಿದ್ದಿರುವ ವೈಷ್ಣವ ದೇವಾಲಯಗಳನ್ನು ಕಾಣಬಹುದು.




ಮುಂದೆ ನಡೆದಾಗ ಕುಸಿದಿರುವ ವರಾಹ ದೇವಸ್ತಾನ ಕಾಣುತ್ತದೆ.  ದುರಸ್ತಿಯಲ್ಲಿರುವುದರಿಂದ ನಮಗೆ ಒಳಗೆ ಬಿಡಲಿಲ್ಲ
ಇದರ ದ್ರುಷ್ಯವನ್ನು ಇಲ್ಲಿ ನೋಡಬಹುದು (ಯು ಟೂಬ್ ವೀಡಿಯೊ). 



ಈ ಕಟ್ಟಡವು ನಾವು ನೋಡುವಾಗಲೇ ಕುಸಿದಿದ್ದರು (ವೀಡಿಯೊ ದಲ್ಲಿ ಇನ್ನು ಚೆನ್ನಾಗಿದೆ) , ನಾವು ಬಂದ ಸುಮಾರು ೧ ವರದ ನಂತರ ಕುಸಿದಿದೆ ಎಂದು ಪತ್ರಿಕೆಯಲ್ಲಿ ಬಂತು !!!


ಮುಂದೆ ನಡೆದಾಗ ಅಚುತ್ಯ ದೇವರಾಯನ (ವಿಷ್ಣು) ಗುಡಿ ಸಿಗುತ್ತದೆ. ಇದು ವಿಜಯವಿತ್ತಲ ದೇವಸ್ಥಾನ ದಂತೆಯೇ ದೊಡ್ಡದಾಗಿದೆ . ದೇವಾಲಯ ಮುಂದಿನ ಸುಂದರ ನೋಟ. ಇಲ್ಲಿ ಕಾಣುವ ರಸ್ತೆಯನ್ನು ಸೂಳೆಯರ ಬಿಡಿ ಎಂದು ಬೋರ್ಡ್ ಹಾಕಿದ್ದರು .  ದೇವಾಲಯದ ಇದು ನಿಜವಾಗಿ ಇರಲಿಕ್ಕೆ ಸಾಧ್ಯನೇ ಅಂತ ನನಗೆ ಅನ್ನಿಸಿತು



ರಸ್ತೆಯ ಪಕ್ಕದಲ್ಲಿ



 ದೇವಾಲಯದ ಒಳಗಿನ ನೋಟ







ಅಚ್ಯುತ ದೇವರಾಯನ ದೇವಾಲಯದ ಹಿಂಬದಿಯಲ್ಲಿ ಮಾತಂಗಿ ಗುಡ್ಡವಿದೆ.ಸಮಯದ ಅಭಾವದಿಂದ ಇದನ್ನು ಹತ್ತಲಿಲ್ಲ .
ಕೆಳಗಿನಿದ ಕಾಣುವ ಮಾತಂಗಿ ಗುಡ್ಡ


ಇಲ್ಲಿಂದ ಹೊರಗೆ ಸೀದಾ  ಬಂದರೆ - ವಿರೂಪಾಕ್ಷ ದೇವಾಲಯದ ಮುಂದಿರುವ ಬೃಹತ್ ನಂದಿಗೆ ಬರುತ್ತೇವೆ .
ನಂದಿಯ ಎದುರಿನಿಂದ ಕಾಣುವ ವಿರೂಪಾಕ್ಷ ದೇವಾಲಯ
ನಂದಿಯ ಮಂಟಪದಿಂದ ಕಾಣುವ ವಿರೂಪಾಕ್ಷ ದೇವಾಲಯದ ನೋಟ

ನಂತರ ನಾವು ಕಮಲಾಪುರದಲ್ಲಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್ಗೆ ಹೊರಟೆವು.  ದಾರಿಯಲ್ಲಿ ಅರಮನೆ ಪಕ್ಕದ ರಸ್ತೆಯಲ್ಲಿ ಕಲ್ಲಿನಲ್ಲಿ ಊಟದ ತಟ್ಟೆಗಳನ್ನೂ ಕೆತ್ತಿದ್ದಾರೆ. ವಿವಿಧ ರೀತಿಯ ಕಲ್ಲುಗಳಲ್ಲಿ ತಟ್ಟೆಗಳನ್ನು ಕಾಣಬಹುದು.

ನಂತರ ನಾವು ಮುಂದೆ ಹೋಗಿ ರಾಣಿ ಸ್ನಾನದ ಹತ್ತಿರವಿದ್ದ ಚಂದ್ರಶೇಕರ ದೇವಸ್ಥನಕ್ಕೆ ಹೋದೆವು


ನಂತರ ಊಟ ಮುಗಿಸಿ,  ಹಂಪೆಯ ಹೊರಗೆ ಗುಡ್ಡದ ಮೇಲಿರುವ ವೆಂಕಟೇಶ್ವರ ದೇವಾಲಯಕ್ಕೆ ಹೊರಟೆವು. ಅಲ್ಲಿ ವಿಷ್ಣುವು ಮೀನಿನ ಆಕರದಲ್ಲಿ ಇದ್ದಾನೆ. ಅಲ್ಲಿ ಒಂದು ಗುಜುರಾತಿ ಕುಟುಂಬವು ನೋಡಿಕೊಳ್ಳುತ್ತಲಿತ್ತು .  ಅವರು ಎಲ್ಲವನ್ನೂ ಬಿಟ್ಟು ಇಲ್ಲಿ ಬಂದಾಗ ಏನು ಇರಲಿಲ್ಲವಂತೆ .  ಕನ್ನಡವನ್ನೂ ಕಲಿತು ದೇವಲಯವನ್ನು ನೋಡಿಕೊಳ್ಳುತ್ತಿದ್ದಾರೆ.

ನಂತರ ಮಾಲ್ಯವಂತ ರಘುನಾಥ ದೇವಸ್ಥಾನಕ್ಕೆ ಭೇಟಿ. ಇದನ್ನು ಸಹ ಉತ್ತರ ಭಾರತದವರೆ ನೋಡಿಕೊಳ್ಳುತ್ತಿದ್ದಾರೆ.  ಇದೊಂದು ದೊಡ್ಡ ದೇವಸ್ಥಾನ .  ಹಂಪೆಯ ಹೊರಗೆ  ನೀವು ಎಲ್ಲೇ ರಾಮನಿಗೆ, ಹನುಮನಿಗೆ ಸಂಬಂಧಪಟ್ಟ ದೇವಸ್ಥಾನಕ್ಕೆ ಹೋದರೆ ಅಲ್ಲಿ ನಡೆಸುವವರು - ಉತ್ತರ ಭಾರತದವರೇ ...



ಇದನ್ನು ಮುಗಿಸಿ, ನಾವು ಪಟ್ಟಾಭಿ ರಾಮ ದೇವಸ್ಥಾನಕ್ಕೆ ಹೊರಟೆವು . ಇದೊಂದು ಸುಂದರವಾದ ಬೃಹತ್ ದೇವಸ್ಥಾನ
ಹೊರಗೆ ಸುಂದರವಾದ ಉದ್ಯಾನವನ್ನು ಬೆಳೆಸಿದ್ದಾರೆ


 


ನಂತರ  ಕೊನೆಯದಾಗಿ ನೋಡಿದ್ದು ಹಂಪಿ ಮುಸಿಯಂ 

ಮುಸಿಯಂ
ಮುಸಿಯಂ ಚೆನ್ನಾಗಿ ನಡೆಸುತ್ತಿದ್ದಾರೆ.  ಇದನ್ನು ಮೊದಲ ದಿನವೇ  ನೋಡಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು. ಒಳಗೆ ಹಂಪೆಯ ಒಂದು ದೊಡ್ಡ  ಮಾಡೆಲ್ ಇಟ್ಟಿದ್ದಾರೆ . ಇಲ್ಲಿ ಮೊದಲೇ ಬಂದರೆ, ಯಾವ್ಯಾವ ಜಾಗಗಳನ್ನು ನೋಡಬೇಕೆಂಬುದು ಸ್ಪಷ್ಟವಾಗುತ್ತದೆ.

ಕೃಷ್ಣ ದೇವರಾಯನ ಭಗ್ನ ವಿಗ್ರಹ
ಅರೇಬ ಕುದುರೆ ವ್ಯಾಪಾರಿಗಳು

ನಂತರ ಬಸ್ನಲ್ಲಿ ಹೊಸಪೇಟೆಯ ರೈಲ್ವೆ ನಿಲ್ದಾಣಕ್ಕೆ ಬಂದೆವು .   ನಿಲ್ದಾಣದಲ್ಲಿ ಒಂದು ಘಟನೆ ನಡೆಯಿತು.  ಒಂದು ಬಡವರಾಗಿ ಕಾಣಿಸುವ ಕುಟುಂಬ ಅಳುತ್ತಿರುವ ಮಗುವನ್ನು ಎತ್ತಿಕೊಂಡು ಪೋಲಿಸಿನ ಹತ್ತಿರ ಬಂದು "ನನಗೆ ಈ ಮಗುವನ್ನು ಒಬ್ಬ ಹೆಂಗಸು ಕೊಟ್ಟು ಹೋದಳು, ಇನ್ನು ಬಂದಿಲ್ಲ - ನಾವು ಈ ಮಗುವನ್ನು ಸಾಕಿಕೊಳ್ಳುತ್ತೇವೆ" .  ಅದಕ್ಕೆ ಆ ಪೋಲಿಸಿನವನು ಹೆಚ್ಚು ವಿಚಾರಿಸದೆ, ಅವರ ಫೋನ್ ನಂಬರ್ ಪಡೆದು ಕಳುಹಿಸಿಬಿಟ್ಟ . ಆ ಪೋಲಿಸ್ ತನ್ನ ಕರ್ತವ್ಯವನ್ನು ಮಾಡದೆ - ಸುಮ್ಮನಿದ್ದುದ್ದನು ನೋಡಿ ಅವನನ್ನು ಪ್ರಶ್ನಿಸಿದಾಗ ಅವನು ಉತ್ತರಿಸುವ ಗೋಜಿಗೆ ಹೋಗಲಿಲ್ಲ.  ಕೊನೆಗೆ ನಾನು ಅವನಿಗೆ - ಹೀಗೆ ಮಗು ಸಿಕ್ಕರೆ , ಯಾವುದಾದರು ಅನಾಥಾಶ್ರಮಕ್ಕೆ ಕಳುಹಿಸಿ; ಅಲ್ಲಿ ಯಾರದಾದರೂ ದತ್ತು ತೆಗೆದುಕೊಳ್ಳುತ್ತಾರೆ ಎಂದು ಹೇಳಿದೇ. 

ಹತ್ತು ನಿಮಿಷದ ನಂತರ ಬಂದ ರೈಲು ಹತ್ತಿ ಹಿಂದಿರುಗಿ ಬೆಂಗಳೂರಿನ ಕಡಗೆ ನಮ್ಮ ಪ್ರಯಾಣ ...

Sunday, June 19, 2011

ವಿಜಯನಗರದ ಪ್ರವಾಸ - ೨

ಮತ್ತೆ ಬಂದ್ರಾ, ಸರಿ ಹಾಗಾದ್ರೆ ಪ್ರಯಾಣ ಶುರು ಮಾಡೋಣ ...

 ಎರಡನೇ ದಿವಸ ನಾವು ಹಂಪೆಯ ಹೊರಗೆ ಸುತ್ತುಮುತ್ತಲಿನ ಜಾಗಗಳನ್ನು ನೋಡಲು ಹೊರಟ್ವಿ.  ಮತ್ತೆ ಬೈಕು ಗಳನ್ನ ಹಿಡಿದು ೯.೩೦ ಗೆ ತೋರಣಗಲ್ಲನ್ನು ಬಿಟ್ಟು ಕಮಲಪುರವನ್ನು ಸೇರಿದೆವು.  ಕಮಲಾಪುರದಲ್ಲಿ ಮ್ಯೂಸಿಯಂನ  ಹತ್ತಿರ ಒಳ್ಳ ಇಡ್ಲಿ-ಪುರಿ ತಿಂಡಿ ಮುಗಿಸಿದೆವು .  ನಂತರ ಆನೆಗುಂದಿಯ ಕಡೆಗೆ ನಮ್ಮ ಪ್ರಯಾಣ ಶುರು.

ನಂತರ ವಿಜಯ ವಿಠ್ಠಲ ದೇವಸ್ಥಾನದ ಮುಂದಿನ ದಾರಿಯಲ್ಲೇ ಹೊರಟರೆ ಹಾಳಾಗಿ ಕುಸಿದಿರುವ ಆನೆಗುಂದಿ ಸೇತುವೆ ಸಿಗುತ್ತದೆ. (ಈ ಚಿತ್ರವನ್ನೂ ನೋಡಿ,  ಇದು ಕೂಡ ಕೃಷ್ಣದೇವ ರಾಯನ ಕಾಲದ್ದು ಎಂದು  ಕೊಳ್ಳಬೇಡಿ ;)) 
ಸೇತುವೆಯ ಎಡಭಾಗದಲ್ಲಿ ನೋಡಿದರೆ, ಅಲ್ಲಿ ಒಂದು ಮಂಟಪ ಕಾಣುತ್ತದೆ

ಇದನ್ನು ಕೊಪ್ಪಳ ಹಾಗು ಬೆಳ್ಳಾರಿ ನಡುವಿನ ಸಂಪರ್ಕಕ್ಕಾಗಿ ಕಟ್ಟಲಾಗುತ್ತಿತ್ತು. (ಇದು ಹಂಪೆಯ ಮೂಲ ಸೌಂದರ್ಯಕ್ಕೆ ಧಕ್ಕೆ ತರುತ್ತದೆ ಎಂದು UNESCO ದ ತೀವ್ರ ವಿರೋಧವಿತ್ತು ). ಕೋರ್ಟ್ ನಲ್ಲಿ   ಪ್ರಕರಣ ನಡೆಯುತ್ತಿದ್ದರಿಂದ ಇದನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ನಂತರ ಇದರ ಕಬ್ಬಿಣಕ್ಕೆ ತುಕ್ಕು ಹಿಡಿದು ಬಿದ್ದುಹೋಗಿದೆ.



ನಡಿಯನ್ನು ದಾಟುವಾಗ ತುಂಗಾಭದ್ರೆಯ ಕೆಲವು ನೋಟಗಳು






ನದಿಯನ್ನು ದಾಟಿದ ತಕ್ಷಣ ನಮಗೆ ಸಿಗುವುದೇ ಆನೆಗುಂದಿ...

ಅನೆಗುಂದಿಗೆ  ವಿಜಯನಗರಕ್ಕಿಂತಲೂ ಹಳೆಯದಾದ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಮೊದಲು ಹಕ್ಕ ಬುಕ್ಕರು ಆನೆಗುಂದಿಯಲ್ಲಿ ತುಘಲಕನ ಸೈನ್ಯವನ್ನು ಹಿಮ್ಮೆಟ್ಟಿಸಿದರು.



ನದಿಯನ್ನು ಸ್ವಲ್ಪ ದಾಟಿ ಮುಂದೆ ಹೋಗುವಾಗ ಕಾಣುವ ಮಂಟಪ. ಗುಡ್ಡದ ಮೇಲೆ ಕೂಡ ಇನ್ನೊಂದು ಮಂಟಪವಿದೆ
  ಮುಂದೆ ಹೋಗುವಾಗ ದಾರಿಯಲ್ಲಿ ಒಂದು ಹಳ್ಳಿ ಸಿಗುತ್ತದೆ .  ಎಡಕ್ಕೆ ಮುಂದೆ ಹೋದಾಗ ಒಂದು ಮಠ ಸಿಗುತ್ತದೆ.

ಇಲ್ಲಿ ನೋಡುವಂತಹದ್ದು ಹೆಚ್ಚಿನದೇನು ಇಲ್ಲ. ಮತ್ತೆ ಹಳ್ಳಿಗೆ ಬರುವಾಗ ದಾರಿಯಲ್ಲಿ ಒಂದು ಸಣ್ಣ ಸ್ಮಾರಕವೊಂದು ಸಿಗುತ್ತದೆ .
ಸೂಚನೆಗಳು ಇದ್ದರು ಕೂಡ - ಅದನ್ನು ಜನರು ಕೊಟ್ಟಿಗೆಯಂತೆ ಉಪಯೋಗಿಸುತ್ತಿದರು
ಕೊಟ್ಟಿಗೆಯಾದ ಸ್ಮಾರಕ
 ಇದರಿಂದ ಈ ಜನರಿಗೆ ಪುರಾತನ ಸ್ಮಾರಕಗಳ ಬಗೆಗಿನ ನಿಷ್ಕಾಳಜಿ, ಅನಾದರ, ಅಜ್ಞಾನ ಸ್ಪಷ್ಟವಾಗುತ್ತದೆ

ನಂತರ ನವ ವೃಂದಾವನಕ್ಕೆ ಹೊರಟೆವು. ನವ ವೃಂದಾವನಕ್ಕೆ ಹೋಗಲು ತುಂಗಭಾದ್ರೆಯನ್ನು ಮತ್ತೆ ಸಣ್ಣ ದೋಣಿಯಲ್ಲಿ ದಾಟಬೇಕು. ದಡದಲ್ಲಿ ಇನ್ನು ಅನೇಕ ಸ್ಮರಕಗಳನ್ನು ನೋಡಬಹುದು .


ಇನ್ನೊಂದು ಸ್ಮಾರಕ + ಕೊಟ್ಟಿಗೆ

ವ್ಯಕ್ತಿ ಒರಗಿಕೊಂಡಿರುವ ಕಲ್ಲಿನ ಕೆತ್ತನೆಗಳನ್ನು ನೋಡಿ

ಹುಲ್ಲಿನ ಕಣಜವಾಗಿರು ಕಟ್ಟಡ


ನವ ಬೃಂದಾವನಕ್ಕೆ ಹೆಚ್ಚಿನ ತಮಿಳರು ಬರುತ್ತಾರೆಂದು ಕಾಣಿಸುತ್ತದೆ. ಇಲ್ಲಿನ ದೋಣಿಯವನು ಕೂಡ ತಮಿಳನ್ನು ಅಚ್ಚುಕಟ್ಟಾಗಿ ಕಲಿತಿದ್ದ . ಬೃಂದಾವನದಲ್ಲಿ ಒಂಬತ್ತು ಯತಿಗಳ ಸಮಾಧಿಯಿದೆ. ಅಲ್ಲಿ ಹೋದ ಕೂಡಲೇ ನಿಮ್ಮ ಕಣ್ಣಿಗೆ ರಾಚುವುದು ತಮಿಳೇ . ಅವರ ಭಾಷಾಭಿಮಾನ ನಮ್ಮ ಕನ್ನಡಿಗರಿಗೆ ಒಳ್ಳೆಯ ಪಾಠ. ನನ್ನಲ್ಲಿ ಪ್ರಶ್ನೆ ಬಂತು - ತಮಿಳುನಾಡಿನಿಂದ ಇಲ್ಲಗೆ ತಮಿಳರು ಬರುತ್ತಿರಬೇಕಾದರೆ - ತಮಿಳರಲ್ಲೂ ಕೂಡ ಮಧ್ವಾಚಾರ್ಯರ ಪ್ರಭಾವ ಅಷ್ಟು ಇತ್ತೇ? ಒಬ್ಬ ತಮಿಳು ಗುರು ಇಲ್ಲಿ  ಬೃಂದಾವನಸ್ಥರಗಿರಬಹುದೇ ?



ಬಲಕ್ಕೆ ಒಳಗೆ ಕಾಣುತ್ತಿರುವುದು ಕೂಡ ತಮಿಳೇ

ಬೃಂದಾವನದಲ್ಲಿ ನನಗೆ ಪೂಜೆ/ನಮಸ್ಕಾರ ಮಾಡುವ ರೀತಿ, ಮಂತ್ರ ತಿಳಿದಿಲ್ಲ . ಹೊರಗಿನಿಂದಲೇ ನಮಸ್ಕಾರ ಮಾಡಿ,
ಏಳನೀರಿನವನೊಂದಿಗೆ ಹರಟುತ್ತ ಕುಳಿತೆ. "ಆನೆಗುಂದಿಯ ಹಿರಿಯ ರಾಜ ಮನೆತನದವ - ಅಚ್ಯುತದೇವರಾಯ ಸ್ವಲ್ಪ ದಿನಗಳ ಹಿಂದೆ ತೀರಿಕೊಂಡರು . ಈಗ ಆನೆಗುಂಡಿ ಅರಮನೆಯಲ್ಲಿರುವುದು - ಅವರ ತಮ್ಮ ರಾಮದೇವರಾಯಣ್ಣ" ಎಂದ.


ತಿರುಗಿ  ಬಂದ ನನ್ನ ಸ್ನೇಹಿತರ,ಮಾತನಾಡುತ್ತಿದರು - ಒಬ್ಬ ಯತಿಗಳ ಬೃಂದಾವನದ ಪೂಜೆಗಾಗಿ ಎರಡು ಮಠಗಳ ನಡುವೆ ಕಲಹವಾಗಿ ಸುಪ್ರೀಂ ಕೋರ್ಟ್ ಗೆ ಹೋಗಿದ್ದರಂತೆ. ಅಲ್ಲಿ ೩ ದಿವಸಗಳ ಪೂಜೆಯಲ್ಲ್ಲಿ ೧.೫ ದಿವಸ ಒಬ್ಬರಿಗೆ,  ಇನ್ನು ೧.೫ ದಿವಸ ಇನ್ನೊಬ್ಬರಿಗೆ ಅಂತ ನಿಶ್ಚಯವಾಯಿತು .  ಆಲ್ಲಿ ಸ್ವಾಮಿ ಈ ನಿರ್ಧಾರಕ್ಕೆ ಕೋರ್ಟ್ ಗೆ ಹೋಗಬೇಕಿತ್ತ?  ಸ್ವಲ್ಪ ಕಣ್ಣಗಲಿಸಿ ನೋಡಿ - ಇಡೀ ಹಂಪೆಯಲ್ಲಿ ಎಷ್ಟು ದೇವಾಲಯಗಳು ನಾಶವಾಗಿವೆ (ವೈಷ್ಣವ ದೇವಾಲಯಗಳನ್ನೇ ತೆಗೆದುಕೊಳ್ಳಿ) ? ಒಗ್ಗಟ್ಟಿಲ್ಲದಿದ್ದರೆ ನಾಳೆ ಈ ಬೃಂದಾವನವು ಕೂಡ ಉಳಿಯುವುದಿಲ್ಲ . ಹಜಾರ ರಾಮ ಮಂದಿರದಲ್ಲಿ ನಮಾಜ್ ನಡೆಯುತ್ತಿರುವಾಗ, ಪುರಂದರ ಮಂಟಪದ ಸಮೀಪ ದರ್ಗಾ ಕಟ್ಟಿದಾಗ ಇವರುಗಳು ಎಲ್ಲಿದ್ದರು ಅಂತ ಯೋಚನೆ ಬಂತು ?

ಇಲ್ಲಿಂದ ನಾವು ಅರಮನೆ ಕಡೆ ಹೊರಟೆವು .





ಒಳಗಡೆ ಹೋದರೆ ನಿಮಗೆ ದೊಡ್ಡ ವರಾಂಡ ಕಾಣಿಸುತ್ತದೆ . ಎಡದಲ್ಲಿ ಮತ್ತು ಬಲದಲ್ಲಿ ಎರಡು ಕಡೆ ಕಟ್ಟಡವು ಪೂರ್ಣವಾಗಿ ಕಾಲನ  ಪ್ರಕೋಪಕ್ಕೆ ಸಿಲುಕಿ ಕುಸಿದು ಹೋಗಿದೆ. ನೋಡುತ್ತಿದರೆ ಯಾವುದೋ ಒಂದು ಪಾಳು ಬಂಗಲೆಗೆ ಬಂದಂತೆ ಅನಿಸುತ್ತದೆ . ಮುಂದೆ ಹೋದರೆ ಎಡಗಡೆ ಹಾಗು ಬಲಗಡೆ ಒಂದೊಂದು ಮನೆ ಕಾಣಿಸುತ್ತದೆ. ಬಲಗಡೆ  ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು ಅನಿಸುತ್ತದೆ . ಎಡಗಡೆ ಮನೆಯಲ್ಲಿ ರಾಮದೇವರಾಯರು ಸಿಕ್ಕಿದರು. ಅವರು ಎತ್ತರವಾಗಿ, ಬೆಳ್ಳಗೆ ಇದ್ದು ವಯಸ್ಸಾದರೂ ಕೂಡ ರಾಜ ಪರಿವಾರದವರಂತೆ ಕಾಣಿಸುತ್ತಿದ್ದರು .

 ಹಾಗೆಯೆ ಸುಮಾರು ೧೫-೨೦ ನಿಮಿಷ ಅವರೊಂದಿಗೆ ಮಾತನಾಡಿದೆವು . ಅವರ ಮಾತಿನಲ್ಲಿ ವಿಷಾದವಿತ್ತು . - "ಹಂಪೆಯ ಬಗ್ಗೆ ಸರಿಯಾಗಿ ಸಂಶೋಧನೆಗುತ್ತಿಲ್ಲ .... ನಮ್ಮ ದೇಶದ ಯಾವ ಒಬ್ಬ ಸಂಶೋಧಕ ಕೂಡ ಬಂದಿಲ್ಲ (ಒಬ್ಬ ಮೇಲೆಯಾಳಿ ಬಿಟ್ಟು) ಪರದೆಶಗಳಿಂದ ಬಹಳಷ್ಟು ಜನರು ಬರುತ್ತಾರೆ.  ಕೃಷ್ಣದೇವರಾಯನ ವಿಗ್ರಹವನ್ನು ಎಲ್ಲಿ ನೋಡಿದರು ರಾಜಕುಮರನಂತೆ ಕಾಣಿಸುತ್ತದೆ ,  ಅವನ ಒಂದು ಸರಿಯಾದ ಚಿತ್ರವಿಲ್ಲ. ಕೃಷ್ಣದೇವರಾಯನನ್ನು ಬಿಟ್ಟು ಸುಮರ ೨೦ ಮಹಾರಾಜರುಗಲಿದ್ದರು . ಅವರ ಬಗ್ಗೆ ಯಾರಿಗೂ ಗೊತ್ತಿಲ್ಲ." ವಿಜಯನಗರದ ಅರಸರು ಬೆಂಗಳೂರಿನ ಕೆಂಪೇಗೌಡನನ್ನು ಹೊಸ ರೀತಿಯ ನಾಣ್ಯಗಳನ್ನು ಟಂಕಿಸಿದಕ್ಕಾಗಿ  ಬಂದಿಸಿಟ್ಟದ್ದ ತಿಳಿಸಿದರು.  ಆ ಬಿಸಿಲಲ್ಲಿ ಹಂಪೆಯನ್ನು ನೋಡಲು ಬಂದ ನಮ್ಮನ್ನು ಕಂಡು ಆಶ್ಚರ್ಯಗೊಂಡರು . ಇಷ್ಟು ಮಾತನಾಡಿ ಹೊರಟೆವು. ಅರಮನೆಯಾ ಒಬ್ಬರು ಗಂಗಾವತಿಯಲ್ಲಿ ಶಾಸಕರಗಿದ್ದರಂತೆ .
ಸರಕಾರವನ್ನು ಬಿಡಿ, ಇಷ್ಟು ಸೌಲಭ್ಯವಿದ್ದರೂ ಕೂಡ ಇವರುಗಳೇ ಇನ್ನು ಯಾಕೆ ಇನ್ನು ಅರಮನೆಯನ್ನು ರಿಪೇರಿ ಮಾಡಿಸಿಲ್ಲ ಎಂದು ತಿಳಿಯಲಿಲ್ಲ.


                                        

ಅರಮನೆಯ ವೀಡಿಯೊ.

ಅರಮನೆಯ ನಂತರ ನಾವು ಅಂಜನಾದ್ರಿ ಬೆಟ್ಟದ ಕಡೆಗೆ ಹೊರಟೆವು.  ದಾರಿಯಲ್ಲಿ ದುರ್ಗೆಯ ದೇವಸ್ಥಾನ ಕಾಣಿಸುತ್ತದೆ .


 ಅಂಜನಾದ್ರಿ ಬೆಟ್ಟದ ನೋಟ



ಆ ಬೆಟ್ಟದ ಮೆಟ್ಟಿಲನ್ನು ಹತ್ತುತ್ತಲೇ ಹೆಚ್ಚಾಗಿ ಹಿಂದಿ ಮತ್ತು ಇಂಗ್ಲಿಷನಲ್ಲಿ ಬರದ ರಾಮನ ಹೆಸರುಗಳು ಕಾಣುತ್ತವೆ. ಮೇಲೆ ಹೋದಾಗ ಅಂಜನೇಯನ ದೇವಸ್ಥಾನವಿದೆ. ಆ ದೇವಸ್ಥಾನವನ್ನು ಉತ್ತರ ಭಾರತೀಯರು ನಡೆಸುತ್ತಿದ್ದಾರೆ.  ನೀವು ಆನೆಗುಂಡಿಯಲ್ಲಿ ಎಲ್ಲೇ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳವನ್ನೂ ನೋಡಿದರೆ - ಅಲ್ಲಿ ಉತ್ತರ ಭಾರತದವರು ದೇವಸ್ಥನವನ್ನು ನಡೆಸುತ್ತಾರೆ .

ನಂತರ ನಾವು ಪಂಪ ಸರೋವರಕ್ಕೆ ಹೋದೆವು  ಇಲ್ಲಿಯೇ ರಾಮನು ಸುಗ್ರೀವ, ಹನುಮಂತನನ್ನು ಸಂಧಿಸಿದ್ದು.




ಪಂಪ ಸರೋವರದ ಒಂದು ವೀಡಿಯೊ


ಇದಾದ ಮೇಲೆ - ಆನೆಗುಂಡಿಯ ಹತ್ತಿರ ಸುಮಾರು ೧೦-೨೦ ಸಾವಿರ ವರ್ಷಗಳು ಹಳೆಯದಾದ ಆದಿ ಮಾನವನ ಗುಹೆ ಹಾಗು ಚಿತ್ರ ರಚನೆಗಳಿವೆ . ಅಲ್ಲಿಗೆ ಹೊರಟೆವು.  ಹಂಪೆಯ ಸುತ್ತಮುತ್ತಲು ಬಂದೆ ಒಡೆಯುವುದು ನಿಷೆದವಿದ್ದರು - ಅದನ್ನು ಉಲ್ಲಂಘಿಸುತ್ತಿರುವ ದೃಶ್ಯ



ಇಲ್ಲಿಂದ ಸ್ವಲ್ಪ ಮುಂದೆ ಹೋಗಿ ರಸ್ತೆಯಲ್ಲಿ ಗಾಡಿ ನಿಲ್ಲಿಸಿದೇವು . ಹೊಲವನ್ನು ದಾಟಿ, ಬಂಡೆಗಳ ಹಿಂದಿನ ಕಿರಿದಾದ ದಾರಿಯಲ್ಲಿ  ಹೋದರೆ ಒಂದು ವಿಶಾಲವಾದ ಪ್ರದೇಶ ಕಾಣಿಸುತ್ತದೆ. ಸ್ವಲ್ಪ ಹುಡುಕಿದರೆ ಆದಿ ಮಾನವನ ಗುಹೆ ಸಿಗುತ್ತದೆ.



ಇದನ್ನು ಮುಗಿಸಿಕೊಂಡು, ಸಣಾಪುರದ ಕೆರೆಗೆ ಹೋಗಿ ಈಜಡಿದೆವು



ಇದಾದ ಮೇಲೆ ಗಂಗಾವತಿಗೆ ಹೋಗಿ ಹುಲಿಗೆಯಮ್ಮ ದೇವಸ್ಥಾನ ನೋಡಿ ತೋರಣಗಲ್ಲಿಗೆ ಹೋದೆವು . ದಾರಿಯಲ್ಲಿ ಹೋಗುವಾಗ ಒಂದು ಹಳ್ಳಿಯಲ್ಲಿ" ಸೂಪರ್ ಸ್ಟಾರ್ ಉಪೇಂದ್ರ " ಅಂತ ಹೋಟೆಲ್ ಸಿಕ್ತು  ;)

ಇಲ್ಲಿಗೆ ಎರಡನೆಯ ದಿನದ ಪ್ರವಾಸ ಮುಗಿಯಿತು. ಇಲ್ಲಿ ಬೇಸರ ತರುವ ಒಂದು ಸಂಗತಿ ಎಂದರೆ ನಾವು ಕೃಷ್ಣ ದೇವ ರಾಯನ ಸಮಾಧಿಯನ್ನು ನೋಡಲು ಮರೆತದ್ದು :(