Friday, May 27, 2011

ವಿಜಯನಗರದ ಪ್ರವಾಸ - ೧

ಗೆಳೆಯರೇ

ನನಗೆ ೪-೫ ತಿಂಗಳಿಗೊಮ್ಮೆ ಕುಟುಂಬದೊಡನೆ ಪ್ರವಾಸಕ್ಕೆ ಹೋಗುವುದು ವಾಡಿಕೆ.  ಹೀಗೆಯೇ ಮಾರ್ಚಿನಲ್ಲಿ ಎಲ್ಲಿ ಹೋಗುವುದೆಂದು ಯೋಚಿಸುತ್ತಿದಾಗ - ಹಂಪೆಯ ನೆನಪಾಯಿತು.  ಅಂತರ್ಜಾಲದಲ್ಲಿ ಹುಡುಕಿದಾಗ - ಚಿತ್ರಗಳನ್ನೂ ನೋಡಿದಾಗ ಇದು ಪ್ರವಾಸಕ್ಕೆ ಸೂಕ್ತ ಸ್ಥಳವೆಂದು ಖಚಿತವಾಯಿತು.

ಆದರೆ ಗೆಳೆಯರೊಂದಿಗೆ  ಚರ್ಚಿಸಿದಾಗ ತಿಳಿದ ವಿಷಯ : ಮಾರ್ಚ್ - ಮೇ ತಿಂಗಳುಗಳಲ್ಲಿ ಹಂಪೆಯ ಪ್ರವಾಸ ಕಷ್ಟ . ಬಹಳಷ್ಟು ಬಿಸಿಲಿರುತ್ತದೆ ಹಾಗು ಅಲ್ಲಿ ಹೆಚ್ಚು ತಿರುಗಾಡಬೇಕು.  ನನಗೆ ೧ ವರ್ಷದ ಮಗಳಿರುವುದರಿಂದ ಇದು ಸುಲಭವಲ್ಲ. ಅದ್ದರಿಂದ  ಕೆಮ್ಮಣ್ಣುಗುಂಡಿ, ಕುದುರೆಮುಖ, ಮುಳ್ಳಯ್ಯನಗಿರಿಗೆ ಹೋಗಿ ಬಂದೆವು.

ಆದರೆ ನಾನು ಹಂಪೆಯ ಬಗ್ಗೆ ನಾನು ತಿಳಿದು ಕೊಂಡಿದ್ದು , ಓದಿದ್ದು ಮನಸ್ಸಿನಲ್ಲಿಯೇ ಉಳಿಯಿತು. ಹಂಪೆಗೆ ಹೋಗಲು ಸ್ನೇಹಿತರನ್ನು ಹುಡುಕತೊಡಗಿದೆ.  ಮೇ ಸಮಯದಲ್ಲಿ ಸುಮಾರು ೪೦ - ೪೨ ಡಿಗ್ರಿ ಬಿಸಿಲಿರುತ್ತದೆ. ಅಂತಹ ಸಮಯದಲ್ಲಿ ೩ ದಿವಸ ತಿರುಗಾಡಲು ನನ್ನಂತೆಯೇ ಆಸಕ್ತಿಯಿರುವ ಜನರೇ ಬೇಕು.  ಏಪ್ರಿಲ್ ನಲ್ಲಿಯೇ ೪ ಜನರನ್ನು ಹುಡುಕಿ ನಮ್ಮ ರೈಲ್ವೆ ನಲ್ಲಿ ಟಿಕೆಟ್ ಬುಕ್ ಮಾಡಿದೆ. ಕೊನೆ ಘಳಿಗೆಯಲ್ಲಿ ಇಬ್ಬರು ಗೆಳೆಯರು ಕೈ ಕೊಟ್ಟ ಕಾರಣ, ನಾವು ಮೂವರು ಸ್ನೇಹಿತರು ಗುರುವಾರ ಹೊರಟೆವು.

ದಿನ  ೧:
ಅಲ್ಲಿ ಮರುದಿನ ಬೆಳಿಗ್ಗೆ ಹಂಪೆಯಿಂದ ಸುಮಾರು ೨೦ ಕಿಲೋಮೀಟರು ದೂರವಿರುವ ತೋರಣಗಲ್ಲಿನಲ್ಲಿ ಪರಿಚಯಸ್ಥರ ಮನೆಯಲ್ಲಿ ಉಳಿದು ಕೊಂಡೆವು.

ನಾವುಗಳು ಎರಡು ಬೈಕು ಗಳನ್ನೂ ಪಡೆದು ಕಮಲಾಪುರವನ್ನು ಮುಟ್ಟಿದಾಗ ೧೧ ಗಂಟೆ . ಅಲ್ಲಿಂದ ಹಂಪೆಯನ್ನು ಪ್ರವೇಶಿಸುತ್ತಿದ್ದಂತೆ ದೊಡ್ಡ ದೊಡ್ಡ ಕಲ್ಲಿನ ಕಟ್ಟಡಗಳು, ಗೋಡೆಗಳು ನಮ್ಮನ್ನು ಇನ್ನೊಂದು ಲೋಕಕ್ಕೆ ಕರೆದೊಯ್ದವು.

ವಿರೂಪಾಕ್ಷ ದೇವಸ್ಥಾನ ಮುಟ್ಟುತ್ತಿದಂತೆ guide ಗಳು ನಿಮ್ಮ ಹಿಂದೆ ಬೀಳುತ್ತಾರೆ.  ವಿರೂಪಾಕ್ಷ ದೇವಸ್ಥಾದ ಗೋಪುರ ಇತರೆ ಹೊಯ್ಸಳರ ದೇವಾಲಯದ ಗೋಪುರದಂತೆಯೇ ಇದೆ



ಒಳಗೆ ಹೊಕ್ಕ ತಕ್ಷಣ ನಿಮಗೆ ಬಲಗಡೆ - ವಿಜಯನಗರದ ರಾಜ ಲಾಂಛನ ದೊರೆಯುತ್ತದೆ . ಆಶ್ಚರ್ಯವೆಂದರೆ ಇವರ ಲಾಂಛನವು, ಬಾದಾಮಿ  ಚಾಲುಕ್ಯರ ಲಾಂಛನವನ್ನೂ ಬಹಳಷ್ಟು ಹೋಲುತ್ತದೆ.  (ಎರಡರಲ್ಲಿಯೂ ವರಾಹ, ಸೂರ್ಯ ಹಾಗು ಚಂದ್ರರಿದ್ದಾರೆ)

ವಿರೂಪಾಕ್ಷ ದೇವಾಲಯದಲ್ಲಿ ಕಾಣುವ ಲಾಂಛನ


ಎಡಕ್ಕೆ ತಿರುಗಿದರೆ ನಿಮಗೆ ಸಭಾ ಮಂಟಪ ಸಿಗುತ್ತದೆ

ದೇವಸ್ಥಾನಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಇಲ್ಲಿಯ ವಿರೂಪಕ್ಷನನ್ನು ಶ್ರೀ ರಾಮನೆ ಪೂಜಿಸಿದ್ದಾನೆ ಎನ್ನುತ್ತಾರೆ. ಪಕ್ಕದಲ್ಲಿ ಭುವನೇಶ್ವರಿಯ ದೇವಾಲಯವಿದೆ.  ಅದರ ಪಕ್ಕದಲ್ಲಿ ಸ್ವಲ್ಪ ಕೆಳಗೆ ಇಳಿದರೆ ವ್ಯಾಸರಾಯರು (ಶೈವರ ಹಾಗೂ ವೈಷ್ಣವರ ನಡುವಿನ ಸಮರಸಕ್ಕಾಗಿ ) ಸ್ಥಾಪಿಸಿದ ವಿಷ್ಣು ಹಾಗು ಶಿವ ಲಿಂಗವಿದೆ.

ವಿರೂಪಾಕ್ಷ ದೇವಾಲಯದ ಮುಂದೆ ಒಂದು ಮಂಟಪವಿದೆ.  ಆದರೆ ಮುಂದೆ ಶ್ರೀ ಕೃಷ್ಣದೇವರಾಯ ಕನ್ನಡದಲ್ಲಿ ಬರೆಯಿಸಿದೆ ಶಾಸನವಿದೆ. ಕೃಷ್ಣದೇವರಾಯ ಮೂಲತಃ ಕನ್ನಡಿಗ. ಅವನ ತಂದೆ ತುಳು ನಾಡಿನ - ನರಸ ನಾಯಕ, ಅವನು ತೆಲುಗನ್ನು ಪೋಷಿಸಿದ್ದರಿಂದ ಅವನನ್ನು ಕೆಲವರು ತೆಲುಗಿನವನೆಂದು ತಪ್ಪಾಗಿ ತಿಳಿಯುತ್ತಾರೆ. ನಮ್ಮ guide (ಅವನಿಗೆ ರೂ.೧೦೦೦ ಕೊಟ್ಟಿದ್ದೆವು ) ಕೂಡ ಕೃಷ್ಣದೇವರಾಯ ತೆಲುಗಿನವನೆಂದು ಹೇಳಿದಾಗ ಮೇಲಿನದನ್ನು ಅವನಿಗೆ ತಿಳಿಸಿದೆ.

ದೇವಾಲಯದ ಹೊರಗೆ ಬಂದ ಬಲಗಡೆ ಬೆಟ್ಟದ ಮೇಲೆ ಹಲವಾರು ದೇವಾಲಯಗಳು ಕಂಡು ಬಂದವು. ಆಸಕ್ತಿಯಿದ್ದರೂ ಕೂಡ ಸಮಯದ ಅಭಾವ ಅವುಗಳನ್ನೂ ನೋಡಲಾಗಲಿಲ್ಲ.

ನಂತರ ನಾವು ಬಲಗಡೆ ರಸ್ತೆಯಲ್ಲಿ ಮೇಲೆ ಬಂದರೆ - ಕಡಲೆ ಕಾಲು ಗಣೇಶ ದೊರೆಯುತ್ತದೆ
ಹೊರಗಿನ ದೇವಾಲಯ:

ನಮ್ಮ  ಗಜಾನನ ವಿಗ್ರಹ: ೨೧ ಅಡಿ ಎತ್ತರವಿದೆ.
  ದೇವಾಲಯದ  ಕಂಬದಲ್ಲಿ ಇದ್ದ ಚಿತ್ರ  (ಅರಬ್ಬನಂತೆ ಇದೆ)


 ದೇವಾಲಯದ ಮುಂದೆ ಬಂದು ಬಲಕ್ಕೆ ತಿರುಗಿದಾಗ ಒಂದು ದ್ವಾರ ದೊರೆಯುತ್ತದೆ. ಇಲ್ಲಿ ನೀವು ನೋಡುವ ಕಲ್ಲಿನ ಹಾಸುಗಳು ಹಳೆಯ ಕಾಲದ್ದೆ.


 ಮುಂದೆ ನಡೆದಾಗ ಕಂಡ ಶಿವನ ದೇವಾಲಯ ಹಾಗು ಅದರ ಮುಂದಿರುವ ಭಗ್ನ ಗೊಂಡ ನಂದಿ ವಿಗ್ರಹ . ಮತ್ತು ಮುಂದೆ ನಡೆದಾಗ - ಬಂಡೆಯಲ್ಲಿ ಗಣೇಶ ಸುಂದರ ಕೆತ್ತನೆಯು ಕಂಡಿತು.  ಹಂಪೆಯಲ್ಲಿ ನೀವು ಎಲ್ಲೇ ಕಣ್ಣಾಡಿಸಿದರೂ ಅಲ್ಲಿ ಕಲ್ಲಿನಲ್ಲಿ ಒಂದು ಕೆತ್ತನೆಯೋ ಅಥವಾ ಕಟ್ಟಡವೂ ಕಾಣಿಸಿಯೇ ತಿರುತ್ತದೆ. ಇಲ್ಲಿನ ಪ್ರತಿಯೊಂದು ಕಲ್ಲು ಕೂಡ ಒಂದು ಸಾಮ್ರಾಜ್ಯದ ಗತ ವೈಭಬವನ್ನು ಹೇಳುತ್ತದೆ.

ಒಂದು ಬಂಡೆಯಲ್ಲಿ ಕೆತ್ತಿದ ಗಣೇಶ ಮೂರ್ತಿ


ಮುಂದೆ  ನಾವು ಸಾಸಿವೆ ಕಾಲು ಗಣೇಶ ವಿಗ್ರಹವನ್ನು ನೋಡಿದೆವು . ಇದು ಸುಮಾರು ೯ ಅಡಿ ಎತ್ತರವಿದೆ.


ಈ ಸಾಸಿವೆ ಕಾಳು ಹಾಗೋ ಕಡಲೆ ಕಾಳು ಗಣೇಶ ವಿಗ್ರಹಗಳನ್ನು ಒಬ್ಬ ವ್ಯಾಪಾರಿಯು ಆ ಕಾಳುಗಳ ವ್ಯಾಪಾರದಿಂದ ಬಂದ ಲಾಭದಲ್ಲಿ ಕಟ್ಟಿಸಿದನೆಂದುಹೇಳುತ್ತಾರೆ.

ಗಣೇಶನ ವಿಗ್ರಹದ ಎಡಭಾಗದಲ್ಲಿ ವಿಷ್ಣುವಿನ ಪಾದದ ಗುರುತಿದೆ.   ಸಾಸಿವೆಕಾಳು ಗಣಪನ ಬಲಕ್ಕೆ ಒಂದು ಹೇಮಾ ಕೂಟ ಗುಡ್ಡವಿದ ಅದು ಸೈನಿಕರ check post ನಂತೆ ತೋರುತ್ತತೆ . ಒಳಗೆ ಹೋದಾಗ ಅಲ್ಲಿ ಒಂದು ಎರಡು ಮಹಡಿಯ ಮಂಟಪವಿದೆ.


ಆ ಮಂಟಪ ಮೇಲಿನಿಂದ ತೆಗೆದ ವೀಡಿಯೊ

ಹೇಮಕೂಟದಿಂದ ವಿರೂಪಾಕ್ಷ ದೇವಾಲಯಕ್ಕೆ ತಿರುಗಿ ಹೋಗುವ ದಾರಿಯಲ್ಲಿ ಬಹಳಷ್ಟು ಕಟ್ಟಡಗಳಿವೆ. ಅವುಗಳನ್ನೂ ನಾವು ಸಮಯದ ಅಭಾವದಿಂದ ನೋಡಲಾಗಲಿಲ್ಲ .

ಮುಂದೆ ನಾವು ಬಾಲ ಕೃಷ್ಣ ದೇವಾಲಯಕ್ಕೆ ಹೋದೆವು. ಇದನ್ನು ಕ್ರಿಷ್ಣದೆವರಾಯನು ತನ್ನ ಉತ್ಕಲದ ಸಾಮ್ರಾಜ್ಯದ ವಿಜಯದ ನೆನೆಪಿಗಾಗಿ ಕಟ್ಟಿಸಿದ್ದು. ಒಳಕ್ಕೆ ಹೋದಾಗ ಗರ್ಭ ಗುಡಿಯಲ್ಲಿ ಬಹಳ ಕತ್ತಲಿತ್ತು. ನಾವು ಸ್ನೇಹಿತರು ಚಪ್ಪಲಿಗಳನ್ನು ಬಿಟ್ಟು, ಗರ್ಭ ಗುಡಿಯೊಳಗೆ ಹೋದೆವು. ಕಾಲಿಗೆ ಪಾಚಿಯಂತೆ ಭಾಸವಾಗುತ್ತಿತ್ತು .  ಸುಮ್ಮನೆ ನಮ್ಮ ಮೊಬೈಲ್ ನ ಬೆಳಕನ್ನು ಬಿಟ್ಟು ಮೇಲೆ ನೋಡಿದಾಗೆ  ಚಾವಣಿಯನ್ನು ಬಾವುಲಿಗಳು ಪೂರ್ಣವಾಗಿ ಆವರಿಸಿದ್ದವು . ನಮ್ಮ ಕಾಲಿಗೆ ತಾಕಿದ್ದು ಪಾಚಿಯಲ್ಲ, ಅವುಗಳ ಹಿಕ್ಕೆ ಎಂದು ತಿಳಿದು ತಕ್ಷಣ ಹೊರಗೆ ಓಡಿ ಬಂದೆವು. ದೇವಾಲಯದ ಎಡಗಡೆ ,  ಧಾನ್ಯ ಸಂಗ್ರಹಾರವಿದೆ. ಇದು  ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿದೆ . ದೇವಾಲಯದ ಸುತ್ತಲು ಎತ್ತರದ ಗೋಡೆಗಳಿವೆ

ಬಾಲ ಕೃಷ್ಣನ ದೇವಾಲಯದ ದ್ವಾರದ ಗೋಪುರ

ದೇವಾಲಯದ ಮುಂದೆ - ಮಾರುಕಟ್ಟೆಯನ್ನೂ ನೋಡಬಹುದು. ಈಗಲು ಇದರ ಉತ್ಖನ ಪ್ರಗತಿಯಲ್ಲಿದೆ

ಈ ಮಾರುಕಟ್ಟೆ ಎಡಬದಿಯಲ್ಲಿ ಒಂದು  ಸುಂದರವಾದ ಪುಷ್ಕರನಿಯಿದೆ.

ನಂತರ ನಾವು ಹೋಗಿದ್ದು - ನರಸಿಂಹ ಹಾಗು ಬಡವಿ ಲಿಂಗ ನೋಡಲು. ದಾರಿಯಲ್ಲಿ ಸೋಡಾ ಕುಡಿಯಲು ಹೋದಾಗ ಗಾಡಿಯವನ ಹತ್ತಿರ, ದುಡ್ಡಿನ ಪೆಟ್ಟಿಗೆಯಲ್ಲಿ ಒಂದು ಸುಂದರವಾದ ಗಣೇಶ ಲೋಹದ ವಿಗ್ರಹವಿತ್ತು . ಮುಸ್ಲಿಮನಾದ ಅವನ ಹತ್ತಿರ ಆ ವಿಗ್ರಹವನ್ನು ಕಂಡು ಇಲ್ಲೆಯೇ ಎಲ್ಲೋ ಸಿಕ್ಕಿರಬೇಕು ಎಂದು ಕೊಂಡೆವು.

ಉಗ್ರ ನರಸಿಂಹ
ಉಗ್ರ  ನರಸಿಂಹನನ್ನು ಕೆಲವರು ಲಕ್ಷ್ಮಿ ನರಸಿಂಹ ಎನ್ನುತ್ತಾರೆ  . ಇಲ್ಲಿ ಲಕ್ಷಿ ವಿಗ್ರಹವನ್ನು ನಾಶ ಮಾಡಲಾಗಿದೆ ಎನ್ನುತ್ತಾರೆ. (ಆದರೆ ಇದು ಉಗ್ರ ನರಸಿಂಹನ ಮೂರ್ತಿ ಎನ್ನುವುದಕ್ಕೆ ನಮಗೆ ರಾಮನ ದೇವಸ್ಥಾನದಲ್ಲಿ ಇದೆ ಮೂರ್ತಿಯ ಸಣ್ಣ ಪ್ರತಿಕೃತಿ ದೊರೆಯುತ್ತದೆ )


ಸದಾ ನೀರಿನಲ್ಲಿ ಮುಳುಗಿರುವ ಬಡವಿ ಲಿಂಗ


ಇಲ್ಲಿಂದ ಮುಂದೆ ನಾವು ಅಕ್ಕ - ತಂಗಿ ಕಲ್ಲುಗಳನ್ನೂ ನೋದುವಷ್ಟರಲ್ಲಿ ಊಟದ ಸಮಯವಾಗಿತ್ತು .  ಕಮಲಾಪುರಕ್ಕೆ ಹಿಂತಿರುಗಿ ಊಟಕ್ಕೆ ಹೋದೆವು.

ಊಟದ ನಂತರ ನಾವು ಹೋಗಿದ್ದು ವಿಜಯ ವಿಠ್ಠಲ ದೇವಸ್ಥಾನಕ್ಕೆ ಹೋದೆವು .   ದೇವಸ್ಥಾನಕ್ಕೆ ಸುಮಾರು ೧.೫ ಕಿಲೋಮೀಟರು ದೂರದಲ್ಲಿ ಗಡಿಯನ್ನು ನಿಲ್ಲಿಸಿ ರೂ ೨೦ ಟಿಕೆಟ್ ತೆಗೆದುಕೊಂಡು ಬ್ಯಾಟರಿ ಗಡಿಯಲ್ಲ್ಲಿ ಹೋಗಬೇಕು. ದೇವಸ್ಥಾನಕ್ಕೆ ಹೋಗುವಾಗ ದಾರಿಯ ಎರಡು ಕಡೆಗಳಲ್ಲೂ ಇರುವ ಕಲ್ಲಿನ ಹಾಸುಗಳು ಹಾಗು ಕಲ್ಲಿಂದ ರಚನೆಗಳನ್ನೂ ನೋಡಿ ಇದು ಒಂದು ಪ್ರಮುಖ ಬಿದಿಯಾಗಿತ್ತೆಂದು ತೋರುತ್ತದೆ.


ವಿಜಯ ವಿಠ್ಠಲ ದೇವಾಲಯ

ವಿಜಯ ವಿಠ್ಠಲ ದೇವಾಲಯಕ್ಕೆ ಹೋಗುವ ದಾರಿ
ದೇವಾಲಯದ ಪಕ್ಕದಲ್ಲಿರುವ ಕಟ್ಟಡ 


ಒಳಗೆ ಹೋದರೆ, ಬಲದಲ್ಲಿ ಪುರಂದರ ಮಂಟಪ ಸಿಗುತ್ತದೆ, ಎಡಕ್ಕೆ ಒಂದು ಮಂಟಪವಿದೆ .  ದೇವಾಲಯದ ಮುಂದಿನ ಭಾಗ ಪೂರ್ಣ ಬಿದ್ದೆ ಹೋಗಿದೆ.  ಬಲಭಾಗದಲ್ಲಿ ಸಂಗೀತದ ಕಂಬಗಳಿವೆ. (ಅದನ್ನು ನಮಗೆ ಮುಟ್ಟಲು ಬಿಡಲಿಲ್ಲ)

ವಿಜಯ ವಿಠ್ಠಲ ದೇವಾಲಯ

ನಾನು ವಿಜಯ ವಿಠ್ಠಲ ದೇವಾಲಯದೊಳಗೆ ತೆಗೆದ ವೀಡಿಯೊ




ದೇವಾಲಯ ಹೊರಗೆ ಬಲಗಡೆ - ಇನ್ನುಎರಡು ದೇವಾಲಯಗಳಿವೆ. ಅವುಗಳ ಹೆಸರು ನಮಗೆ ಗೊತ್ತಾಗಲಿಲ್ಲ
ವಿಜಯ ವಿಠ್ಠಲ ದೇವಾಲಯದ ಬಲ ಭಾಗಕ್ಕಿರುವಇನ್ನೊಂದು ಕಟ್ಟಡ . ಇದರ ಬಲಭಾಗದಲ್ಲಿ ಮತ್ತೊಂದು ದೇವಾಲಯವಿದೆ

ಇಲ್ಲೇ ಬಳಗದೆಯೇ - ಕೃಷ್ಣ ದೇವರಾಯ ಕಾಲದ ಚಿನ್ನದ ನಿಧಿಯು ದೊರೆತ್ತಿದ್ದು (ನಾವು ಹೋಗುವುದಕ್ಕೆ ಎರಡು ವಾರಗಳ ಮುಂಚೆ )

ನವರಾತ್ರಿ ದಿಬ್ಬದ ಕಡೆಗೆ ಹೊರಟೆವು . ದಾರಿಯಲ್ಲಿ - ರಾಣಿಯ ಸ್ನಾನದ ಮನೆಯ ನೋಡಿಕೊಂಡು ಹೋದೆವು

ನವರಾತ್ರಿ ದಿಬ್ಬವು ಒಂದು ಅರಮನೆಯ ಪ್ರದೇಶವೆಂದು ಗುರುತಿಸುತ್ತಾರೆ . ಇದೊಂದು ವಿಶಾಲವಾದ ಪ್ರದೇಶ. ಇಲ್ಲಿ ಸುಮಾರು ೩ ತರಹದ ಕಲ್ಲುಗಳನ್ನೂ ನೋಡಬಹುದು - ಮೊದಲನೆಯದು ಸಮನ್ಯವಾಗಿ ಎಲ್ಲ ಕಡೆ ಸಿಗುವನ್ತಹದ್ದು . ಎರಡನೆಯದು - ಹಸಿರು ಬಣ್ಣದ್ದು ಮೂರನೆಯದು ಗ್ರಾನೈಟ್ ಬಣ್ಣದ್ದು .

ನವರಾತ್ರಿ ದಿಬ್ಬದಲ್ಲಿ ಕಾಣುವ ವಿವಿಧ ಪ್ರಾಣಿಗಳು. ಇಲ್ಲಿ ಒಂಟೆಯನ್ನೂ ಸಹ ನೋಡಬಹುದು

ದಿಬ್ಬದ ಒಂದು ನೋಟ

ಅರಮನೆಯಲ್ಲಿ ಕೇಳಿಗೆ ಇರುವ ಒಂದು ಕೊಟ್ಟಡಿಯ ದಾರಿ

ಪುಷ್ಕರಣಿ

ಅರಮನೆಯ ಒಂದು ದೃಶ್ಯಾವಳಿ

ಮತ್ತೊಂದು: ಇದರಲ್ಲಿ ಹಂಪೆಯ  ಅತೀ ದೂಡ್ಡ ಈಜು  ಕೊಳವಿದೆ



ಮಹಾನವಮಿ  ದಿಬ್ಬದ ಮುಂದೆ ಹೋದರೆ ಕಮಲ್ ಮಹಾಲಕ್ಕೆ ಮುಟ್ಟುತ್ತೇವ. ಅಲ್ಲಿನ ಕೆಲವು ಚಿತ್ರಗಳು 


ಇದೆ ಕಮಲ್ ಮಹಲ್ . ಇದರಲ್ಲಿ ಗೋಡೆಗಳಲ್ಲಿ ತಣ್ಣೀರು ಹರಿಸಿ ತಂಪಾಗಿರುತ್ತದೆ



ಕೋಟೆಯ ನಾಲ್ಕು ಮೂಲೆಗಳಲ್ಲಿರುವ "gaurd tower"

ಇನ್ನೊಂದು ಟವರ್

ಮತ್ತೊಂದು
ಅಳಿದಿರುವ ರಾಣಿಯ ಅರಮನೆ
ರಾಣಿ ಅರಮನೆಯ ಪಕ್ಕದಲ್ಲಿ ಆನೆ ಲಾಯವಿದೆ. ಇಲ್ಲಿ ಹನ್ನೊಂದು ಪಟ್ಟದ ಆನೆಗಳನ್ನು ಇಡುತ್ತಿದ್ದರು
ಆನೆ ಲಾಯ

ಕುದುರೆ ಲಾಯ
ಇಷ್ಟು ಮುಗಿಸುವುದರ ಹೊತ್ತಿಗೆ ಸಂಜೆ ಸುಮಾರು ೪ ಗಂಟೆಯಾಗಿತ್ತು. ಇಲ್ಲಿಂದ ನಾವು ಹಜಾರ ರಾಮ ದೇವಸ್ಥಾನಕ್ಕೆಬಂದೆವು.

ಇದೊಂದು ಪ್ರಶಾಂತ ವಾಗಿರುವ ಸುಂದರ ದೇವಾಲಯ. ಹೊರಗೆ ದಸರಾ ಸಮಯವನ್ನೂ ವರ್ಣಿಸುವ ಕೆತ್ತೆನೆಗಳಿವೆ. ಇಲ್ಲಿ ರಾಮಾಯಣದ ಬಹಳಷ್ಟು ಕೆತ್ತನೆಗಳಿವೆ
ದಸರಾ ವೈಭವದ ಕೆತ್ತನೆಗಳು

ದೇವಾಲಯದ ಹಿಂದಿರುವ ಮಂಟಪ

ಇದು ಏನೆಂದು ನನಗೆ ಗೊತ್ತಾಗಲಿಲ್ಲ. ಇದು ಹಂಪೆಯಲ್ಲಿ ಬಹಳಷ್ಟು ದೇವಾಲಯಗಳಲ್ಲಿ ಕಾಣಿಸುತ್ತದೆ.

ರಾಮನ ದೇವಾಲಯದ ಹಿಂದಿರುವ ಚಿತ್ರ. ಬುದ್ದನದೋ ? ಜೀನನದೋ ಗೊತ್ತಿಲ್ಲ

ಕಲ್ಕಿ ಅವತಾರದ ಚಿತ್ರ

ನಾನು ಮೇಲೆ ಹಾಕಿರುವ ಉಗ್ರ ನರಸಿಂಹನ ಸಣ್ಣ ಪ್ರತಿರೂಪ 

ಹಜಾರ ರಾಮ ಮಂದಿರದಲ್ಲಿ ಕೆಲವು ಮುಸ್ಸಲ್ಮಾನರು ಬಂದು ನಮಾಜು ಮಾಡಲು ಶುರುಮಾಡಿದ್ದರಂತೆ. ಇಲ್ಲನ ಆಡಳಿತವು ಎಚ್ಚೆತ್ತುಕೊಂಡು ಅದನ್ನು ನಿಲ್ಲಿಸಿದೆ. ಇಷ್ಡು ಮುಗಿಸಿ ನಮ್ಮ guide ಹೊರಟ. ನಾಳೆ ಕರೆದರೆ ಏನೇನು ತೋರಿಸುವನೆಂದು ಕೇಳಿ, ಬರೆಸಿಕೊಂಡು ;) ಕಳುಹಿಸಿ ಕೊಟ್ಟೆವು

ದೇವಸ್ಥಾನದ ಮುಂದೆ ಪಾನ್ ಸುಪಾರಿ ರಸ್ತೆಯಿದೆ . ಅಲ್ಲಿ ತುಂಬ ಕಟ್ಟಡಗಳ ಅವಶೇಶವನ್ನು ನೋಡಬಹುದು
ಪಾನ್ ಸುಪಾರಿ ರಸ್ತೆ
 ಮುಂದೆ ಹಾಗೆಯೇ ಹೋದಾಗ ಒಂದು ದೇವಾಲಯದಲ್ಲಿ ಮಾಂಸದ ಅಡಿಗೆ ಮಾಡುತ್ತಿರುವುದು ಕಂಡಿತು.  ಸ್ಪಷ್ಟವಾಗಿ ಬೋರ್ಡ್ ಹಾಕಿದ್ದರು ಕೂಡ, ನಿಯಮವನ್ನು ಮಿರಿದ್ದರು.  ಇದನ್ನು ನಿಲ್ಲಿಸಬೇಕೆಂದು ೧೦೦ ಗೆ ಫೋನ್ ಮಾಡಿದರ, ಆ ಮೂಲೆಯಲ್ಲಿದ್ದವರು , ಫೋನ್ ಕಟ್ ಮಾಡುತ್ತಿದರು :( .  ಹೀಗೆ ಆದರೆ ಹಂಪೆ ಉಳಿದಂತೆಯೇ ...  ಮುಂದೆ ಒಬ್ಬಕಾವಲುಗಾರನನ್ನು ಕೇಳಿದಾಗ - ಇದುಮಾಮೂಲು ಸಾಹೇಬರೇ..  ಆ ಒಂದು ದೇವಸ್ಥಾನದಲ್ಲಿ ಅವರು ಅಡುಗೆ ಮಾಡಲು ಅವಕಾಶವಿದೆ ಎನ್ನುವ ಉತ್ತರ


ಕುರಿ/ಮೇಕೆ ಮಾಂಸ ನೆತಾದುತ್ತಿರುವುದು


ಪಾನ್ ಸುಪಾರಿ ರಸ್ತೆಯ ಕೊನೆಯಲ್ಲಿ ಕಂಡ ಮಂಟಪ
 
ಇಲ್ಲಿಗೆ ನಮ್ಮ ಮೊದಲನೆಯ ದಿನದ ಪ್ರವಾಸ ಮುಗಿತು.  ಮುಂದಿನದನ್ನು ಮತ್ತೊಂದು ಬ್ಲಾಗಿನಲ್ಲಿ ಬರೆಯುವೆ.
 

Monday, March 14, 2011

ಇನ್ನು ಆಸೆ ಬಿಡದ ಅಡ್ವಾಣಿ

ಅಯೋಧ್ಯ ಚಳುವಳಿಯಲ್ಲಿ ಅಡ್ವಾಣಿ ಅವರ ಪಾತ್ರ ಎಲ್ಲರಿಗೂ ಗೊತ್ತಿದೆ . ಅವರ ರಥ ಯಾತ್ರೆಯಿಂದ ದೇಶದೆಲ್ಲೆಡೆ ಹಿಂದುಗಳಲ್ಲಿ ಮೂಡಿದ ಸಂಚಲನ ತಿಳಿದಿದೆ. ಜನ್ಮಸ್ಥಾನ ಮಸಿದಿಯನ್ನು (ಬಾಬ್ರಿ ಮಸಿದಿ)  ಉದುರಿಸುವಾಗಲು ಕೂಡ ಅವರು ಎಲ್ಲರನ್ನು ಉತ್ತೆಜಿಸುತ್ತಿದ್ದರು ...

ಲಿಬೇರ್ಹಾನ್ ಕಮಿಟಿ ಮುಂದೆ ನೀವು - "ಬಾಬ್ರಿ ಮಸಿದಿ ಉರುಳಿಸಿದ್ದು ದುಃಖಕರ ವಿಷಯ" ಎಂದಾಗ ಆರೋಪಿ ಸ್ಥಾನದಿಂದ ತಪ್ಪಿಸಿಕೊಳ್ಳಲು ನೀವು ಮಾಡುತ್ತಿರುವ ಉಪಾಯ ಎಂದುಕೊಂಡೆ.

ಸರಿ ಬಿಡಿ !!! ಈ ನಡುವೆ(ಸುಮಾರು ೪-೫ ವರ್ಷಗಳಿಂದ ) ಅಡ್ವಾಣಿ ಅವರು ಇದೆ ವಿಷಯವನ್ನೂ ಮತ್ತೆ, ಮತ್ತೆ  ಪ್ರಸ್ತಾಪಿಸಿದ್ದಾರೆ .

ಇತ್ತಿಚೀಗೆ ಟ್ವಿಟ್ವಿರ ನಲ್ಲಿಯೂ ಅವರದ್ದು ಇದೆ ಗೋಳು . ಜೊತೆಗೆ ಇನ್ನೊಂದು ಜ್ಞಾನೋದಯ - "ಇದರಿಂದ ಭ.ಜ.ಪ ಪಕ್ಷದ ಪ್ರತಿಷ್ಟೆಗೆ ದಕ್ಕೆ ಬಂದಿದೆ "


ಅಲ್ಲ ಅಡ್ವಾಣಿಯವರೇ ನಿಮಗೆ ಯಾಕೆ - ಪಾಪ ಪ್ರಜ್ಞೆ ?  ಮಸಿದಿ ಮೇಲೆ ಇದ್ದಕ್ಕಿದ್ದ ಹಾಗೆ ಏಕೆ ಪ್ರೀತಿ ?  ಒಂದು ವಿಷಯವನ್ನೂ ಮರೆಯಬೇಡಿ - ಮಸಿದಿ ವಿಷಯದಿಂದಲೇ ನಿಮ್ಮ ಪಕ್ಷವು ಅಧಿಕಾರಕ್ಕೆ ಬಂತು. ನೀವು ರಾಷ್ಟ್ರೀಯ ನಾಯಕರಾದಿರಿ .

ಹೌದು ಮಸಿದಿ ದ್ವಂಸದಿಂದ ಪಕ್ಷಕ್ಕೆ ಲಾಭವಾದರೂ, ನಿಮಗೆ ನಷ್ಟವಾಯಿತು .... ಮಿತ್ರ ಪಕ್ಷಗಳು ಸೌಮ್ಯವಾದಿಯಾದ ವಾಜಪೆಯಿಯನ್ನು ಪ್ರಧಾನಿಯಾಗಿ ಆರಿಸಿದರು.  ಇದರಿಂದ ನಿಮಗೆ ಉಗ್ರವಾದದ ತಪ್ಪು ಅರಿವಾಗಿ ಹೀಗೆ ಮಾಡುತ್ತಿದ್ದಿರಾ?

 ಅಥವಾ ಪಾಕಿಸ್ತಾನದಲ್ಲಿ ಪ್ರವಾಸದಲ್ಲಿ ದೊರೆತ ಆತಿಥ್ಯ ಕಂಡು ಮನಸ್ಸು ಬದಲಾಯಿತೆ?

ನೀವು ಎಷ್ಟೇ ಪಶ್ಚಾತಾಪ ಪಟ್ಟರು - ನಿಮ್ಮ ಮುಂದೆ ಪ್ರಧನಿಯಾಗುವುದಿಲ್ಲ ಅಥವಾ ಇತಿಹಾಸದಲ್ಲಿ ಹಿಂದೂ-ಮುಸಲ್ಮಾನರ ಐಕ್ಯತೆಗೆ ನಿಮ್ಮನ್ನು ಸ್ಮರಿಸುವುದಿಲ್ಲ

Saturday, January 22, 2011

ನಮ್ಮ ದೇಶಕ್ಕೆ ಬೇಕೇ "Inner Line Permit"

ಗೆಳೆಯರೇ,

ನಮ್ಮ ದೇಶದಲ್ಲಿ ಈಗಾಗಲೇ ಹಲವಾರು ರಾಜ್ಯಗಳಲ್ಲಿ "Inner Line Permit" ಜಾರಿಯಲ್ಲಿದೆ. ಇದು ಭಾರತೀಯರಿಗೆ ನಮ್ಮ ದೇಶದಲ್ಲಿಯೇ ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಹೋಗುವಾಗ ಬೇಕಾದ ದಾಖಲೆ.  ಇದರ ಉದ್ದೇಶ ಏನೇ ಇರಬಹುದು.  ಆದರೆ ಈಗ ಇದು ನಮ್ಮ ದೇಶದಲ್ಲಿಯೇ ಪ್ರತಿ ರಾಜ್ಯಕ್ಕೂ ಅವಶ್ಯ ಎಂದೆನಿಸುತ್ತಿದೆ .

ಈಗ  ನಮ್ಮ ಬೆಂಗಳೂರಿನ ಪರಿಸ್ಥಿತಿಯೇನ್ನೇ ನೋಡಿ..    ದೇಶದ ಯಾವುದೋ ಮೂಲೆಯಿಂದ ಬರುತ್ತಾರೆ . ಸ್ವಲ್ಪ ವರುಷ ಗಂಡ ಹೆಂಡತಿಯರಿಬ್ಬರೂ ಕೆಲಸ ಮಾಡಿ - ಮನೆಯನ್ನೂ  ಅಪಾರ್ಟ್ ಮೆಂಟ ಕೊಂಡುಕೊಂಡು ಇಲ್ಲಿಯೇ ನೆಲೆಸುತ್ತಾರೆ .!!!
ಇನ್ನು ಮಾರ್ವಾಡಿಗಳು, ಪಟೇಲ್ ರು ಉತ್ತರದಿಂದ "ದೊಡ್ಡ ಮೊತ್ತದ " ಹಣದ ಚೀಲವನ್ನು ತಂದು ಸಂಸಾರ ಸಮೇತ ಒಟ್ಟೊಟ್ಟಿಗೆ ಬಂದು ಅಪಾರ್ಟ್ಮೆಂಟ್ ಸಮೂಹವನ್ನು ಕಟ್ಟಿಕೊಂಡು ಒಟ್ಟಿಗೆ ವಾಸಿಸುತ್ತಾರೆ .


ಇವರಿಗೆ ಯಾರಿಗೂ ಕನ್ನಡ ಅಭಿಮಾನ ಇರುವುದಿಲ್ಲ  , ಬೆಳೆಸುವ ಅವಶ್ಯಕತೆ ಇರುವುದಿಲ್ಲ .  ಇವರಿಂದ ಬೆಂಗಳೂರಿನಲ್ಲಿ ಬಡ ಕನ್ನಡಿಗರಿಗೆ ಕಟ್ಟಿಕೊಳ್ಳಲು ಮನೆ,ಸೈಟು ಸಿಗುವುದಿಲ್ಲ.  ಬೆಂಗಳೂರು ಹದೆಗೆಟ್ಟಿದೆ.

ಇಂದು ಇಲ್ಲಿ ನಮ್ಮ ಸಂಸ್ಕೃತಿ , ಭಾಷೆ ಉಳಿಸಿಕೂಳುವ ಅವಶ್ಯಕತೆ ಇದೆ. ಪ್ರತಿಯೊಂದು  ರಾಜ್ಯಕ್ಕೂ Permit  ಅವಶ್ಯಕತೆ ಇದೆ. ವಲಸಿಗರ  ಹಕ್ಕನ್ನು ನಿಯಂತ್ರಿಸಬೇಕು . ಅವರು ಕರ್ನಾಟಕಕ್ಕೆಕೆಲಸಕ್ಕೆ  ಬರುವುದರೆ - ಕನ್ನಡವನ್ನು ಕಲಿತುಬರಬೇಕು , ಇಲ್ಲ ಬಂದು ಒಂದು ಅವಧಿಯೊಳಗೆ ಕನ್ನಡ ಕಲಿಯಬೇಕು .

ಇಲ್ಲಿ ಕೆಲಸಕ್ಕೆ ಬರುವುದಾದರೆ - ಬಂದು ದುಡಿದು ಕೊಂಡು ಹೋಗಲಿ . !!!  ಮನೆ ಕೊಂಡು ಕೊಳ್ಳಲು,  ಜಮೀನು ಕೊಳ್ಳಲು ಹಕ್ಕು ಇರಬಾರದು .  ಅದು ಕೇವಲ - ಇಲ್ಲಿಯ ಸಂಸ್ಕೃತಿ , ಭಾಷೆ , ಇತಿಹಾಸ ಕಲಿತ ನಂತರವೇ ದೊರೆಯಬೇಕು .

ಇದು ಕೇವಲ ಕರ್ನಾಟಕ್ಕೆ ಮಾತ್ರವಲ್ಲ  , ಪ್ರತಿಯೊಂದು ರಾಜ್ಯಕ್ಕೂ ಅವಶ್ಯಕತೆ ಇದೆ. 

ನೀವು  ಎನೆನ್ನುವಿರಿ....

Monday, August 30, 2010

ಪೆಟ್ರೋ ಡಾಲರ್ ಮತ್ತು ಅದರ ಪುರಾಣ

ಗೆಳೆಯರೇ,

ನಮಗೆಲ್ಲ ಈ ಪ್ರಶ್ನೆಗಳಿರಬಹುದು - ಜಗತ್ತಿನ ದೇಶಗಳೆಲ್ಲ ಡಾಲರ್ ಅಂತ ಯಾಕೆ  ಸಾಯುತ್ತವೆ? ಮೊನ್ನೆ ಮೊನ್ನೆ ಅಮೆರಿಕದಲ್ಲಿ (ಹಾಗು ಜಗತ್ತಿನಲ್ಲಿ ) ಆರ್ಥಿಕ ಸಂಕಷ್ಟವಾದಾಗ ಪೆಟ್ರೋಲ್ ಬೆಲೆ ಇಳಿಯುವ ಬದಲು ಏಕೆ $೧೦೦ ವರೆಗೂ ಜಾಸ್ತಿಯಾಯಿತು?  ಆರ್ಥಿಕ ಸಂಕಷ್ಟವಾದಾಗ ಅಮೆರಿಕ ಏಕೆ , ೯೦ರ ದಶಕದಲ್ಲಿ ಭಾರತದಂತೆ ಚಿನ್ನವನ್ನು ಒತ್ತೆ ಇಡಲಿಲ್ಲ ? ಅಮೆರಿಕಾವು ತೈಲಕ್ಕಾಗಿಯೇ (ತನ್ನ ಹತ್ತಿರವೇ ಸಾಕಷ್ಟು ಇದ್ದರು ) ಇರಾಕ್ ಮೇಲೆ ಯುದ್ಧ ಸಾರಿತೆ? ಇದು ನಿಜವೇ?

ಇದಕ್ಕೆಲ್ಲ ಉತ್ತರ ಒಂದೇ - ಪೆಟ್ರೋ ಡಾಲರ್.  ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿಯೋಣ.

ಈ ಕಥೆ ಶುರುವಾಗುವುದು ಎರಡನೆಯ ಮಹಾಯುದ್ಧದ ನಂತರ.  ಇಡೀ ಯುರೋಪೆ, ಸಂಪನ್ಮೂಲ ಕೊರತೆಯಿಂದ, ಹಣದ ಕೊರತೆಯಿಂದ ಬಳಲುತ್ತಲಿತ್ತು. ಆಗ ಅಮೆರಿಕ ಸರ್ಕಾರ , ಯೂರೋಪಿಗೆ ಸಹಾಯ ಮಾಡಿ, ಸಂಪನ್ಮೂಲಗಳನ್ನು ಹಾಗು ಅಮೆರಿಕಾದ ಕಂಪನಿಗಳಿಂದ ನೆರವನ್ನು ಪಡೆಯಲು ಡಾಲರ್ ನೀಡಿತು.  ಯುದ್ಧದ ನಂತರ, ಅಮೆರಿಕದ ಆರ್ಥಿಕತೆಯು ಸದೃಡ ಹಾಗು ಬಲಿಷ್ಟವಾಯಿತು ... ಈ ಎಲ್ಲ ಕಾರಣಗಳಿಂದ ಅಮೆರಿಕಾದ ಡಾಲರ್ ಗೆ, ಜಗತ್ತಿನಲ್ಲಿ  ಬಹಳ ಮಹತ್ವ ಬಂತು.

ಸರಿ ಸುಮಾರು ಎರಡನೇ ಮಹಾಯುದ್ಧದ ನಂತರ, ಪೆಟ್ರೋಲ್ ಮೂಲಕ,  ಅರಬರಿಗೆ ಸಂಪತ್ತು ಹರಿದುಬರತೊಡಗಿತು.  ಬಂದ ದುಡ್ಡನ್ನು ಹೇಗೆ ಇಡಬೇಕೆಂದು ಯೋಚಿಸುತ್ತಿರುವಾಗ, ಜಗತ್ತಿನಲ್ಲಿ ಎಲ್ಲ ಕಡೆ ಬೆಲೆಯಿರುವ ಡಾಲರ್ ನಲ್ಲಿ ಸಂಗ್ರಹಿಸಲು ಯೋಚಿಸಿ,  ತೈಲ ವ್ಯಾಪಾರಕ್ಕಾಗಿ ಎಲ್ಲ ದೇಶಗಳಿಂದ ಡಾಲರ್ ಕೇಳತೊಡಗಿದರು .   ಈಗ ತಗೊಳ್ಳಿ ಡಾಲರ್ ಗೆ ಚಿನ್ನದ ಬೆಲೆ ಬಂತು. ಜಗತ್ತಿನಲ್ಲಿ ಡಾಲರ್ ಹುಚ್ಚು ಪ್ರಾರಂಭವಾಯಿತು.  ಎಲ್ಲರು ಡಾಲರ್ ಗಾಗಿ, ಅಮೆರಿಕಾಗೆ ರಫ್ತು ಮಾಡುತ್ತಿದ್ದಾರೆ.   ಈಗ ಅಮೇರಿಕಾದಲ್ಲಿ ಎಲ್ಲವೂ ಕಡಿಮೆ ಬೆಲೆಗೆ ದೊರೆತು, ಅಲ್ಲಿ ಜನರ ಜೀವನ ಮಟ್ಟ ಮತ್ತೂ ಪ್ರಗತಿ ಕಂಡಿತು. (ಆದರೆ - ಬೇರೆ ದೇಶದ ಜನರು, ಡಾಲರ್ ಗಾಗಿ ತಮ್ಮ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡಿಕೊಳ್ಳುತ್ತಿದ್ದರೆ.  ಹಾಗು ಈ ಸಂಪತ್ತು ಕೆಲವೇ ಕೆಲವು ಜನರ ಕೈಯಲ್ಲಿ ನಲಿದಾಡುತ್ತಿದೆ. ಉದಾಹರಣೆ: ಗಣಿ ಧಣಿಗಳು ಅದಿರು ರಫ್ತು ಮಾಡುತ್ತಿರುವ ಹಾಗೆ.  ಇಷ್ಟೇ ಅಲ್ಲ ನಮ್ಮ ದೇಶದ ಉತ್ಕೃಷ್ಟ ಬಾಸ್ಮತಿ ಅಕ್ಕಿ, ಕಾಶ್ಮೀರದ ಆಪಲ್  ಎಲ್ಲವು ನಿಮಗ ಕಡಿಮೆ ಬೆಲೆಗೆ ಅಮೇರಿಕಾದಲ್ಲಿ ಸಿಗುತ್ತದೆ. ನಮಗೆ ಎರಡನೇ ದರ್ಜೆಯ ವಸ್ತುಗಳು). ಇಂದು ಜಗತ್ತಿನಲ್ಲಿ ಸುಮಾರು ೩೦೦ ವರ್ಷಗಳಿಂದ ಇತ್ತೀಚೆನವರೆಗೆ, ಮುದ್ರಿಸಿರುವ ಎಲ್ಲ ಡಾಲರ್ ನೋಟುಗಳಲ್ಲಿ , ಅರ್ಧಕ್ಕಿಂತ ಹೆಚ್ಚಿನ ನೋಟುಗಳು ಅಮೆರಿಕಾದ ಹೊರಗೆ, ವಿವಿಧ ದೇಶಗಳ ಖಜನೆಗಳಲ್ಲಿದೆ.  

ಯಾವುದೇ ದೇಶವು, ತನ್ನು ನೋಟುಗಳನ್ನು ಯದ್ವಾ-ತದ್ವ ಮುದ್ರಿಸುವುದಿಲ್ಲ. ಹಾಗೇನಾದರು ಮುದ್ರಿಸಿದರೆ - ತಡೆಯಲಾಗದ ಹಣದುಬ್ಬರವಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿದು ಬೀಳುತ್ತದೆ. (ಜಿಂಬಾಬ್ವೆ - ಇದಕ್ಕೆ ಉದಾಹರಣೆ) .  ಹಾಗಾಗಿ ದೇಶಗಳು - ತಮ್ಮಲಿರುವ ಚಿನ್ನದ ಸಂಗ್ರಹವನ್ನು ಅನುಸರಿಸಿ ನೋಟನ್ನು ಮುದ್ರಿಸುತ್ತವೆ . ಇದೆ ಕಾರಣಕ್ಕಾಗಿಯೇ ಭಾರತವು ೧೯೯೦ ರಲ್ಲಿ ಚಿನ್ನವನ್ನು, ವಿಶ್ವ ಬ್ಯಾಂಕ್ನಲ್ಲಿ ಚಿನ್ನವನ್ನು ಇಟ್ಟು , ದುಡ್ಡನ್ನು ತಂದಿದ್ದು.  ಆದರೆ  ಅಮೆರಿಕಾಗೆ ಇದು ಅನ್ವಯಿಸುವುದಿಲ್ಲ. ಏಕೆಂದರೆ ಅವರು ಎಷ್ಟೇ ನೋಟುಗಳನ್ನು ಮುದ್ರಿಸಿದರೂ, ವಿವಿಧ ದೇಶಗಳು ಡಾಲರ್ ಅನ್ನು ಸಂಗ್ರಹಿಸಿರುವುದರಿಂದ, ಹಣದುಬ್ಬರ ಒಂದು ಮಟ್ಟಿಗೆ ಹಿಡಿತದಲ್ಲಿರುತ್ತದೆ

ಸಾಲಗಾರ ದೇಶವಾದ, ಅಮೇರಿಕಾದಲ್ಲಿ ೨೦೦೮-೨೦೦೯ ಆರ್ಥಿಕ ಕುಸಿತವಾದಾಗ ಜನರಲ್ಲಿ, ಸರ್ಕಾರದಲ್ಲಿ ಇಬ್ಬರಲ್ಲೂ ಕಾಸಿಲ್ಲ.
ಹಾಗಾಗಿ ಅಮೆರಿಕ ದೇಶವು, ಯದ್ವಾ-ತದ್ವ ನೋಟುಗಳನ್ನು (ಸಾವಿರಾರು ಕೋಟಿ) ಪ್ರಿಂಟ್ ಮಾಡಿತು (ಸುಮಾರು ೭೦ ರ ದಶಕದಲ್ಲಿಯೇ ಅಮೆರಿಕಾವು, ತನ್ನ ಕರ್ರೆನ್ಸಿಗೆ ಇರುವ ಮೌಲ್ಯವನ್ನು ಅರಿತು, ತನ್ನಲ್ಲಿರುವ ಚಿನ್ನದ ಮೌಲ್ಯವನ್ನು ಮೀರಿ ನೋಟು ಮುದ್ರಿಸಿತು ). .ಜಗತ್ತಿನ ಎಲ್ಲ ದೇಶಗಳು ಡಾಲರ ಪಡೆಯಬೇಕಾದರೆ - ಕಷ್ಟ ಪಟ್ಟು ಸೇವೆ, ಸಂಪನ್ಮೂಲಗಳನ್ನು ರಫ್ತು ಮಾಡಬೇಕ. ಆದರೆ ಅಮೆರಿಕ ___ ಒರೆಸಿಕೊಳ್ಳುವ ಪೇಪರಿನ ಬದಲಿಗೆ, ಅದೇ ಕಾಗದದಲ್ಲಿ ನೋಟು ಮೊದ್ರಿಸಿದರಾಯಿತು -   ಇಲ್ಲಿ ಅಮೆರಿಕಾವು ಜಗತ್ತಿನಲ್ಲಿ ಅತೀ ಹೆಚ್ಚು ಚಿನ್ನದ ಸಂಗ್ರಹ ಹೊಂದಿದ್ದರೂ, ಒಂದೇ ಒಂದು ಗ್ರಾಂ ಚಿನ್ನವನ್ನು ಒತ್ತೆ ಇಡಲಿಲ್ಲ. ತನ್ನ ಕರೆನ್ಸಿಗೆ ಇರುವ ಮೌಲ್ಯವನ್ನು ಸರಿಯಾದ ಸಮಯದಲ್ಲಿ ಚೆನ್ನಾಗಿ (ದೂರು) ಉಪಯೋಗಿಸಿಕೊಂಡಿತು. ಇದರಿಂದ ಡಾಲರ್ ಬೆಲೆ ಕಡಿಮೆಯಾಗಿ,  ಅರಬ್ ದೇಶಗಳು ಪೆಟ್ರೋಲ್ ಬೆಲೆ ಏರಿಸಿದವು. (ಚೀನಾದ ಬೇಡಿಕೆ ಕೂಡ ಒಂದು ಕಾರಣ)  .

 ಜಗತ್ತಿನ ಜನರಿಗೆ ಹಾಗು ವಿವಿಧ ದೇಶಗಳಿಗೆ,  ಡಾಲರ್ ನ ಸ್ಥಿರತೆಯ ಬಗ್ಗೆ ಸಂದೆಹವಾಗಿ ಎಲ್ಲರು ತಮ್ಮಲ್ಲಿರುವ ಡಾಲರ್ ಅನ್ನು ಚಿನ್ನದಲ್ಲಿ ಹೂಡಲು ಶುರುಮಾಡಿದರು.  ಹಾಗಾಗಿಯೇ ಚಿನ್ನದ ಬೆಲೆಯೂ, ಅಮೆರಿಕಾದ ಆರ್ಥಿಕ ದುಸ್ಥಿತಿಯ ನಂತರ ಇಷ್ಟು ಹೆಚ್ಚಿರುವುದು.

ಇನ್ನು ಇರಕ್ ವಿಚಾರಕ್ಕೆ ಬಂದರೆ - ಸದ್ದಾಂ ಹುಸಇನ್ ೨೦೦೦ ಇಸಿವಿಯ, ತನ್ನು ದೇಶ ರಫ್ತು ಮಾಡುವ ತೈಲಕ್ಕೆ - ಯುರೋ ತೆಗೆದು ಕೊಳ್ಳಲು ಶುರು ಮಾಡಿದ. ಇದು ಯಶಸ್ವಿಯಾಗಿ ಮುಂದುವರಿದರೆ, ಬೇರೆ ದೇಶಗಳು ಅನುಸರಿಸಿದರೆ ಆಗಬಹುದಾದ ಅಪಾಯವನ್ನು ಮನಗೊಂಡ ಅಮೆರಿಕ, (ಅಣ್ವಸ್ತ್ರ ವಿದೆಯೆಂದು ಸುಳ್ಳು ಹೇಳಿ), ಆಕ್ರಮಣ ಮಾಡಿದರು. ಒಂದೇ ಒಂದು ಸ್ಕೂಟರ್ ಮಾಡಲು ಸಹ ತಾಕತ್ತಿಲ್ಲದ ಇರಕ್, ಅಣ್ವಸ್ತ್ರ ತಯಾರಿಸುವುದೇ ?

ಇಷ್ಟೇ ಅಲ್ಲ, ಅಮೆರಿಕಾವು ಡಾಲರ್ ಉಪಯೋಗಿಸಿ, ಜನರ ಆರೋಗ್ಯದೊಂದಿಗೂ ಚೆಲ್ಲಾಟವಾಡುತ್ತಿದೆ.  ಎಲ್ಲರಿಗೋ ಗೊತ್ತಿರುವಂತೆ ಆಫ್ರಿಕಾದಲ್ಲಿ AIDS ಮಾರಿ ಭಯಂಕರವಾಗಿದೆ.  ಅಮೆರಿಕಾದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ನಡೆಯುವ AIDS ಔಶಧಿಗಳನ್ನು ಪರೀಕ್ಷಿಸಲು,  ಹಲವಾರು ವರ್ಷಗಳ ನಂತರದ ಅದರ ಪರಿಣಾಮಗಳನ್ನು ತಿಳಿಯಲು,  ಆಫ್ರಿಕಾದ ಜನರು ಈಗ ಲ್ಯಾಬ್ನ ಇಲಿಗಳಗಿದ್ದರೆ.  ಅಮೆರಿಕ ಸರ್ಕಾರವು, ಹಣವನ್ನು ಸಹಾಯ ಅಂತ ಸುಳ್ಳು ಹೇಳಿ - ಕೋಟ್ಯಂತರ ಡಾಲರ್ಗಳನ್ನು ಆಫ್ರಿಕಾದ ದೇಶಗಳಿಗೆ ಕೊಡುತ್ತದೆ. ನಿಯಮದ ಪ್ರಕಾರ, ಆ ದೇಶಗಳು ಆ ಹಣವನ್ನು ಉಪಯೋಗಿಸಿ ಔಷಧಗಳನ್ನು ಅಮೇರಿಕಾದ ಕಂಪನಿಗಲಿಂದಲೇ ಪಡೆಯಬೇಕು.  ಹೀಗೆ ಆಫ್ರಿಕಾವನ್ನು ತಮ್ಮ ಪ್ರಯೋಗಾಲಯ ಮಾಡಿಕೊಂಡಿದ್ದಾರೆ.

ಇಲ್ಲಿ ಅರಬರು, ಪೆಟ್ರೋ ಡಾಲರ್ ನ , ಕರೆನ್ಸಿ ಬದಲಿಸುವುದು ಸುಲಭವಲ್ಲ . ಅವರಿಗಾಗಲೇ ೩೦-೪೦ ವರ್ಷಗಳಿಂದ ಸಹಸ್ರಾರು ಕೋಟಿ ಡಾಲರ್ಗಳನ್ನು ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲ,  ಅದರಲ್ಲಿ ಬಹುಪಾಲು ಹಣವನ್ನು - ಅಮೆರಿಕ ದಲ್ಲೇ ಹೂಡಿದ್ದಾರೆ.  ಈಗೆನಾದರು ಅವರು ಕರೆನ್ಸಿ ಬದಲಾಯಿಸಿದರೆ, ಅವರ ಹಣವೆಲ್ಲೇ ಅರಬ್ಬೀ ಸಮುದ್ರದಲ್ಲಿ ಮುಳುಗಿದಂತೆ.


ಇದರಿಂದ ಅಮೆರಿಕಾಗೆ ಕೂಡ ಬಹಳ ನಷ್ಟವಾಗಿದೆ - ಅಲ್ಲಿ ಬಟ್ಟೆ, ತೂಥ್ ಬ್ರುಶ್, ಗಡಿಯಾರ ಇಂತಹ ವಸ್ತುಗಳು ತಯರಾಗುವುದೇ ಇಲ್ಲ. ಎಲ್ಲವು ಅಮದಗುತ್ತದೆ (ಐಫೋನ್ ಕೂಡ :) ).  ತಂತ್ರಜ್ಞಾನ ಕೆಲಸವೆಲ್ಲವೂ ಬೇರೆ ದೇಶಕ್ಕೆ ಹೋಗುತ್ತಿವೆ. ಎಲ್ಲವು ಸುಲಭವಾಗಿ ದೊರೆಯುವುದರಿಂದ,  ಜನರು ಕಷ್ಟಪಡುವುದಿಲ್ಲ (ಓದುವುದಿಲ್ಲ ಕೂಡ). ಹೀಗಾಗಿ ಅಲ್ಲಿ ಜನರ ಕಾರ್ಯದಕ್ಷತೆಯು ಕುಸಿಯುತ್ತಿದೆ.ಇದು ಅವರ ದೇಶಕ್ಕೆ ಒಂದು ದೊಡ್ಡ ಶಾಪ.



ಇಷ್ಟು ನೋಡಿ - ಪೆಟ್ರೋ ಡಾಲರ್ ನ ಪುರಾಣ ... ಈ ನಡುವೆ, ಜನರು ಯುರೋ ವನ್ನು ಸ್ವಲ್ಪ ನೆಚ್ಚುತ್ತಿದ್ದರೆ. ಮುಂದೆ ನೋಡೋಣ ಏನಾಗಬಹುದು.

Friday, August 20, 2010

ಹರಕೊಂಡ್ ತಿನ್ನುವವನನ್ನ ಮುರ್ಕೊಂಡ್ ತಿನ್ನುವುದು

ನಮಸ್ಕಾರ,

ನಮಗೆಲ್ಲ ತಿಳಿದಿದೆ ... ಸಂಸ್ಕೃತ ಒಂದು  ಪ್ರಾಚೀನ, ಪರಿಪೂರ್ಣ ಭಾಷೆ.  ಅದೊಂದು ಜ್ಞಾನ ಭಂಡಾರ.  ಸಂಸ್ಕೃತವನ್ನು ಉಳಿಸಬೇಕು. ಅದರಿಂದ ಜ್ಞಾನವನ್ನು ಪಡೆದು, ನಮ್ಮ ಜೀವನದಲ್ಲಿ, ಇಂದಿನ ವಿಜ್ಞಾನದಲ್ಲಿ, ರಾಜಕೀಯದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು.  ಕೆಲವೊಂದು ಸಂಸ್ಥೆಗಳು ಈ ದಿಸೆಯಲ್ಲಿ ಅದ್ಭುತ ಕೆಲಸ ಮಾಡುತ್ತಿವೆ.  ಇಷ್ಟೇ ಆದರೆ ಸಾಕು. ಎಲ್ಲರಿಗೂ ಪ್ರಯೋಜನವಾಗುತ್ತದೆ.

ಈಗ ಒಂದು ಹೊಸ ಟ್ರೆಂಡ್ ಶುರುವಾಗಿದೆ - ಸಂಸ್ಕೃತ ಗ್ರಾಮಗಳನ್ನು, ಮನೆಗಳನ್ನು ನಿರ್ಮಿಸುವುದು - ಸಾಸನ ಒರಿಸ್ಸಾ, ಜಿಹಿರಿ ಮಧ್ಯಪ್ರದೇಶ , ಮತ್ತೂರು ಕರ್ನಾಟಕ ... (ಇದಕ್ಕೆ ಸಂಸ್ಕೃತ ಭಾರತೀಯಂತಹ ದೊಡ್ಡ ಸಂಸ್ಥೆಗಳು ಹಾಗು ಹಲವಾರು ವ್ಯಕ್ತಿಗಳ ಪ್ರಯತ್ನವಿದೆ).  ಅಂದರೆ ಆ ಗ್ರಾಮಗಳಲ್ಲಿ ಎಲ್ಲರು ಸಂಸ್ಕೃತವನ್ನು ಮಾತನಾಡಲಿಕ್ಕೆ ಬಳಸುತ್ತಾರೆ.

ಈಗಾಗಲೇ ಇಂಗ್ಲಿಷ್, ಹಿಂದಿಯಿಂದ ಉಸಿರಾಡಲು ಕಷ್ಟಪಡುತ್ತಿರುವ ಭಾರತೀಯ ಭಾಷೆಗಳಿಗೆ ಇನ್ನೊಂದು ಗುದ್ದು ಕೊಟ್ಟ ಹಾಗೆ. ಈಗಾಗಲೇ ನಮ್ಮ ದೇಶದಲ್ಲಿ ಹಲವಾರು ಭಾಷೆಗಳು ನಶಿಸಿವೆ, ಇನ್ನು ಕೆಲವು ಅವಸಾನದ ಅಂಚಿನಲ್ಲಿವೆ. ನಮ್ಮ ದೇಶದಲ್ಲಿ ತಮ್ಮ ಮಾತೃಭಾಷೆ  ಬಳಸುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ, ಅಂಥಹ ಪರಿಸ್ಥಿತಿಯಲ್ಲಿ ಮಿಕ್ಕಿರುವ ಜನರನ್ನು ಸಂಸ್ಕೃತ ದಿನನಿತ್ಯ ಬಳಸಲು ಪ್ರಚೋದಿಸುವುದು ಎಷ್ಟು ಸರಿ?

ನಮಗೆ ಸಂಸ್ಕೃತ ಬೇಡವೆಂದಲ್ಲ. ಅದನ್ನು ಓದಿ, ಜ್ಞಾನವನ್ನು ಪಡೆದು, ಇಂದಿನ ಜಗತ್ತಿಗೆ ಅನ್ವಯಿಸಲು ಪಾಂಡಿತ್ಯಪೂರ್ಣವಾದ ಕೆಲ ವ್ಯಕ್ತಿಗಳು ಸಾಕು. ಸಂಸ್ಕೃತ ಗ್ರಾಮಗಳಲ್ಲ, ಸಂಸ್ಕೃತ ಮನೆಗಳಲ್ಲ. ಈಗ ಎಲ್ಲಕಿಂತ ಪ್ರಮುಖವಾಗಿ ಆಗಬೇಕಾಗಿರುವುದು ನಮ್ಮ ಮಾತೃಭಾಷೆಗಳನ್ನು, ಅವಸಾನದಲ್ಲಿ ಇರುವ ಹಲವಾರು  ಉಳಿಸುವುದು, ಬೆಳೆಸುವುದು.


ನಿಮ್ಮ ಏನಂತೀರಿ ಗೆಳೆಯರೇ ?

Wednesday, August 11, 2010

ಮಾಲ್ ಗಳು ಹಾಗೂ ಸ್ಥಳೀಯ ವ್ಯಾಪಾರ

ಜಾಗತಿಕರಣದಿಂದ ಸ್ಥಳೀಯ ವ್ಯಾಪಾರಕ್ಕೆ ಆಗುತ್ತಿರುವೆ ತೊಂದರೆಗಳೆಲ್ಲ ನಮಗೆ ಗೊತ್ತಿದೆ.


ಆದರೆ ಈಗ ನಮ್ಮ ಸ್ಥಳೀಯ ವ್ಯಾಪಾರಕ್ಕೆ ತೊಂದರೆ ಆಗುತ್ತಿರುವುದು, ಯಾವುದೋ ವಿದೇಶಿ ಕಂಪನಿಯಿಂದಲ್ಲ.  ನಮ್ಮದೇ ಆದ "ರಿಲೆಯನ್ಚೆ ಫ್ರೆಶ್", "ಸ್ಪಾರ್", "ಫುಡ್ ವರ್ಲ್ಡ್", "ಟೋಟಲ್", "ಈ-ಜೊನೆ"  - ಇವುಗಳಿಂದ.
ಇಂತಹವುಗಳಿಂದ ನಮ್ಮ ದೇಶದ ಅರ್ಥಿಕ ಸ್ಥಿತಿಯೇ ಬದಲಾಗುತ್ತಿದೆ,  ಇವರುಗಳ ಹಿಡಿತಕ್ಕೆ ಜಾರುತ್ತಿದೆ.

ಒಮ್ಮೆ ಯೋಚನೆ ಮಾಡಿ. ನಾವು ದಿನ ಬೆಳಿಗ್ಗೆ ಎದ್ದು,  ಸೊಪ್ಪು ಮಾರುವವನಿಂದ,  ತರಕಾರಿ ಗಡಿಯವನಿಂದ, ಮನೆ ಪಕ್ಕದ ಸಣ್ಣ ದಿನಸಿ ಅಂಗಡಿಯವನಿಂದ,  ಸಾಕಷ್ಟು ಪದಾರ್ಥಗಳನ್ನು ಕೊಳ್ಳುತ್ತಿದ್ದೆವು.  ಟಿವಿ, ಕಂಪ್ಯೂಟರ್, ವಿದ್ಯುನ್ಮಾನ ಸಾಮಗ್ರಿಗಳು ಬೇಕೆಂದರೂ ಸಹ ಮನೆಯ ಹತ್ತಿರದ ಅಂಗಡಿಗಳಿಗೆ ಹೋಗುತ್ತಿದ್ದೆವು.  ಇಲ್ಲಿ ನಾವು ಕೆಲವು ಅಂಶಗಳನ್ನು ಗಮನಿಸಬಹುದು.  ಇಲ್ಲಿ ವ್ಯಾಪಾರ ಮಾಡುವಾಗ, ಅಂಗಡಿಯವನೊಂದಿಗೆ ಒಂದು ತರಹದ ಭಾಂಧವ್ಯ ಬೆಳೆಯುತ್ತಿತ್ತು.  ಅಷ್ಟೇ ಅಲ್ಲ, ನಾವು ಸಹ ಇಂತಹ ಅಂಗಡಿಗಳಲ್ಲಿ ಎಷ್ಟು ಬೇಕೋ  ಅಷ್ಟೇ ತೆಗೆದುಕೊಳ್ಳುತ್ತಿದ್ದೆವು.  (ದುಡ್ಡು ತೆಗೆದುಕೊಂಡು ಹೋಗುವುದು ಮರೆತರೂ, ಪರಿಚಯದವರು ಎಂದು, ಆಮೇಲೆ ಕೊಡಬಹುದಿತ್ತು) .

ಆದರೆ ಇಂತಹ ಸ್ಥಳೀಯ ರಿಟೇಲ್ ವ್ಯವಸ್ಥೆಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಲಾಭವಿದೆ. ದುಡ್ಡು ಎಲ್ಲರಿಗು ಚಲಾವಣೇಯಾಗುತ್ತಿದೇ. ಪ್ರತಿಯೊಬ್ಬನೂ ಕೂಡ ಇಂತಹ ವ್ಯಪಾರ ಶುರು ಮಾಡಿ ಸ್ವಂತ ಉದ್ದಿಮೆ ಮಾಡಬಹುದು. ಇದರಿಂದ ಕೋಟ್ಯಾಂತರ ಭಾರತೀಯರು ಜೀವನ ಮಾಡುತ್ತಿದ್ದಾರೆ. ಗಾಂಧಿ ಕನಸಿನಂತೆ, ಸಂಪತ್ತು ಎಲ್ಲರಲ್ಲೂ ಹಂಚುತ್ತದೆ.

ಈಗ ಬಂತು ನೋಡಿ, ಮಾಲ್ ಸಂಸ್ಕೃತಿ - ಇದರಿಂದ ಎಲ್ಲ ಸಾಮಗ್ರಿಗಳು ಒಂದೆಡೆ ಸಿಗಬಹುದು. ಆದರೆ ಇದರಿಂದ ನಷ್ಟವೂ ಇದೆ. ಕೋಟ್ಯಂತರ ಜನರಲ್ಲಿ ಹಂಚಿ ಹೋಗುವ ದುಡ್ಡು ಕೇವಲ, ಕೆಲವೇ ಜನರಿಗೆ ಹೋಗುತ್ತದೆ. ಮೇಲೆ ಹೇಳಿದ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ (ಮುಂದೆ ಕಳೆದುಕೊಳ್ಳುವರು ಕೂಡ). ಅಮೀಷಗಳನ್ನು ಒಡ್ಡಿ,  ಕೊಳ್ಳೆಬಾಕ ಸಂಸ್ಕೃತಿ ಹೆಚ್ಚಿಸುತ್ತಿದ್ದಾರೆ.



ಇವರುಗಳಿಂದ ಒಂದು ರೀತಿ, ಭಾಷೆಯೂ ಸಾಯುತ್ತದೆ. ದೇಶದ ಎಲ್ಲೆಡೆ ವ್ಯಾಪಾರ ಮಾಡಬೇಕೆಂದು - ಇಂಗ್ಲಿಷ್, ಹಿಂದಿಯನ್ನೇ ಹೆಚ್ಚಾಗಿ ಬಳಸುತ್ತಾರೆ.  ವಲಸೆ ಬಂದವರಿಗೆ - ಸಾಮಾನ್ಯ ಜನರೊಟ್ಟಿಗೆ ಮಾತನಾಡುವ ಅವಶ್ಯಕತೆಯೇ ಇಲ್ಲದಂತೆ ಮಾಡುತ್ತಾರೆ.


ಗೆಳೆಯರೇ, ನಾವುಗಳು ಆದಷ್ಟು ಈ  ಮಾಲ್ ಗಳನ್ನೂ ಬಿಟ್ಟು, ಸ್ಥಳಿಯರೊಂದಿಗೆ ವ್ಯವಹರಿಸೋಣವೇ?

Monday, August 9, 2010

ಭಾವಸಾರ ಕ್ಷತ್ರಿಯರು, ನನ್ನ ಸ್ನೇಹಿತ ಹಾಗೂ ಕನ್ನಡ

ನನಗೆ ಇತಿಹಾಸ ಓದುವುದು, ರಾಷ್ಟ್ರಗಳ ಬಗ್ಗೆ ತಿಳಿಯುವ ಹವ್ಯಾಸ. ಹೀಗೆಯೇ ನಾನು ಪಾಕಿಸ್ತಾನದ, ಹಿಂದೂ ಚರಿತ್ರೆಯ ಬಗ್ಗೆ ಸ್ವಲ್ಪ ಓದಿದ್ದೇನೆ.  ಅಲ್ಲಿ ಇರಾನ್ ಪಕ್ಕ ಇರುವ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ  "ಹಿಂಗಲ್ಗಂಜ್ ಮಾತೆ" ಅನ್ನುವ ಒಂದು ಪ್ರಸಿದ್ಧ ಯಾತ್ರ ಸ್ಥಳವಿದೆ. 

ನನ್ನ ಕಚೇರಿಯಲ್ಲಿ, ನನ್ನ ಒಬ್ಬ ಸ್ನೇಹಿತನಿದ್ದ. ಕೂತೊಹಲದಿಂದ ಅವನ ಬಗ್ಗೆ ವಿಚಾರಿಸಿದಾಗ ಅವನ್ದು "ಭಾವಸಾರ ಕ್ಷತ್ರಿಯ" ಪಂಗಡ ಅಂತ ಹೇಳಿದ.  ಮುಂದೆ  ವಿಚಾರಿಸಿದಾಗ ಅವರ ಮನೆ ದೇವರು "ಹಿಂಗಲ್ಗಂಜ್ ಮಾತೆ",  ಎಂದ . 
ಒಂದು ಕ್ಷಣ ನನಗೆ ಆಶ್ಚರ್ಯ !!! .  ಇರಾನಿನ ಗಡಿಯಲ್ಲಿ, ಪಾಕಿಸ್ತಾನದಲ್ಲಿ ಇರುವ ದೇವತೆ, ಇವರ ಮನೆ ದೇವರು. ತಕ್ಷಣ ನಾನು "ಹಿಂಗಲ್ಗನ್ಜಾ ?" ಎಂದು ಜೋರಾಗಿ ಕೇಳಿದೆ.  ನಾನು ಆ ರೀತಿ ಹೇಳಿದ್ದಕ್ಕೆ ಅವನಿಗೂ ಆಶ್ಚರ್ಯವಾಯಿತು.

ಅಯ್ಯೋ ಇವರು ಸಾವಿರಾರು ಕಿಲೋಮೀಟರು ದೂರವಿರುವ ಕನ್ನಡ ನಾಡಿಗೆ, ಯಾವಗ ಎಲ್ಲಿಂದ ಬಂದರಪ್ಪ ಅಂತ ಯೋಚನೆ ಬಂತು. ಅದಕ್ಕೆ ಅವನಿಂದ ಉತ್ತರ ದೊರೆಯಲಿಲ್ಲ. ಬಹುಶಃ ೭ನೇ ಶತಮಾನದಲ್ಲಿ, ಮುಹಮ್ಮದ್ ಬಿನ್ ಕಾಸಿಮ್ ಆಕ್ರಮಣ ಹಾಗೊ ಮತಾಂತರ ಶುರು ಮಾಡಿದಾಗೆ, ಇವರ ವಲಸೆ ಶುರುವಾಗಿರಬಹುದು ಎಂದುಕೊಂಡೆ.

ಇವರಂತೆ ದೇಶ ಬಿಟ್ಟ ಇಸ್ರೇಲಿಗಳ ನೆನಪಾಯಿತು. ಕೇಳಿದೆ "ನಿಮ್ಮ ಜನರಿಗೆ ಇಸ್ರೆಲಿಗಳಂತೆ ಪುನಃ ನಿಮ್ಮ ದೇಶಕ್ಕೆ ಮರುಳಲು ಅಸಕ್ತಿಯಿಲ್ಲವೇ, ಇಷ್ಟವಿಲ್ಲವೇ?"

ಅವನೆಂದ - "ಅದೆಲ್ಲ ನನಗೆ ಗೊತ್ತಿಲ್ಲ, ಯೋಚನೆಯೂ ಇಲ್ಲ. ಈಗ ನಾನೊಬ್ಬ ಅಪ್ಪಟ ಕನ್ನಡಿಗ"
ಆಗ ಅವನು ಕೊಟ್ಟ ಉತ್ತರ ಕೇಳಿ ನನಗೆ ಖುಷಿಯೂ ಆಯಿತು (ಎಲ್ಲಿದಲೋ ಬಂದ ವಲಸೆ ಜನರು ನಮ್ಮಲ್ಲಿ ಬೆರೆತಿರುವ ಬಗ್ಗೆ ) , ಸ್ವಲ್ಪ ಬೇಜಾರೂ ಕೂಡ ಆಯಿತು(ಅವನಿಗೆ ತನ್ನ ಪೂರ್ವಜರ ಭೂಮಿಯ ಬಗ್ಗೆ ಇರುವ ಅನಾದರ).


ಇನ್ನೊಂದು ವಿಷಯ: ಬಸವನಗುಡಿಯಲ್ಲಿಯೇ "ಭಾವಸಾರ ಕ್ಷತ್ರಿಯ ಬ್ಯಾಂಕ್" ಇದ್ದರೂ, ಅದರ ಜನರ ಬಗ್ಗೆ , ನನ್ನ ಗೆಳೆಯನೊಂದಿಗೆ ಮಾತನಾಡುವವರೆಗೂ ತಿಳಿದಿರಲಿಲ್ಲ.